ಶಿವಮೊಗ್ಗ : ನಗರದ ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳ ಮೇಲೆ ಅತ್ಯುತ್ತಮ ಕಲಾ ಚಿತ್ತಾರಗಳು ಮೂಡಿ ಬಂದಿವೆ. ಇವು ಕಲಾಭಿಮಾನಿಗಳ ಹೃದಯವನ್ನ ಗೆಲ್ಲುತ್ತಿವೆ.
ನಗರವೇನೋ ಸ್ಮಾರ್ಟ್ ಆಗುತ್ತಿದೆ. ಇದಕ್ಕೆ ತಕ್ಕಂತೆ ಇಲ್ಲಿನ ಜನರೂ ಕೂಡಾ ಸ್ಮಾರ್ಟ್ ಆಗಬೇಕಿದೆ. ಹೀಗಾಗಿ, ಎಲ್ಲೆಂದರಲ್ಲಿ ಕಸ ಬಿಸಾಡುವ ಜನರ ಚಾಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ಹೊಸದೊಂದು ಪ್ಲಾನ್ ಮಾಡಿದೆ. ನಗರದ ಸರ್ಕಾರಿ ಕಾಂಪೌಂಡ್‌ಗಳ ಮೇಲೆ ಬಣ್ಣಗಳ ಚಿತ್ತಾರ ಮೂಡಿಸಿ ಸುಂದರ ಸಂದೇಶ ನೀಡುವ ಕೆಲಸ ಮಾಡಿದೆ.
ಮ್ಯೂರಲ್ ವರ್ಕ್‌ಗಳ ಮೂಲಕ ಅರಳಿದ ಕಲಾ ವೈಭವ : ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಗೋಡೆ ಚಿತ್ರಗಳ ಮೂಲಕ ಸಂದೇಶ ನೀಡುವ ಕೆಲಸ ಮಾಡಿದೆ. ನಗರದ ಪ್ರಮುಖ ರಸ್ತೆಗಳ ಅಕ್ಕಪಕ್ಕದ ಗೋಡೆಗಳ ಮೇಲೆ ನಿಸರ್ಗ ಚಿತ್ರಗಳ ಮೊರೆ ಹೋಗಿದೆ.
ಒಟ್ಟು 52.2 ಲಕ್ಷ ರೂ. ವೆಚ್ಚದಲ್ಲಿ, ನಗರದ ಸೌಂದರ್ಯೀಕರಣ ಹೆಚ್ಚಿಸುವ ಸಲುವಾಗಿ, ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ, ನಗರದ ಅನೇಕ ಕಡೆಗಳಲ್ಲಿ ಮ್ಯೂರಲ್ ವರ್ಕ್‌ಗಳ ಮೂಲಕ ಕಲಾ ವೈಭವ ಅರಳಿಸಲಾಗುತ್ತಿದೆ.
ಕಾಂಪೌಂಡ್‌ಗಳ ಮೇಲೆ ವಿನಾಕಾರಣ ಬರೆಯಲಾಗುವ ಗೋಡೆ ಬರಹಗಳನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರಿಗೆ ಇಕೋ ಟೂರಿಸಂ, ಹಿಂದಿನ ಸಾಂಪ್ರದಾಯಿಕ ಆಟೋಟ, ಸಾಂಪ್ರದಾಯಿಕ ಹಬ್ಬಗಳ ಆಚರಣೆ ಮತ್ತು ಇಲಾಖೆಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ತಿಳಿಸುವ ಉದ್ದೇಶದಿಂದ ಚೆಂದದ ಪೇಂಟಿಂಗ್ಗಳನ್ನು ಮಾಡಿಸಲಾಗಿದೆ. ಇವೆಲ್ಲವೂ ಈಗ ಜನರ ಕಣ್ಮನ ಸೆಳೆಯುತ್ತಿವೆ.
ಕಣ್ಮನ ಸೆಳೆದ ಪೇಂಟಿಂಗ್ಗಳು : ಸುಂದರವಾಗಿ ನೈಜತೆಯಿಂದ ಮೂಡಿ ಬಂದಿರುವ ಚಿತ್ರಗಳಲ್ಲಿ ಧುಮ್ಮಿಕ್ಕುವ ಜೋಗ ಜಲಪಾತ, ಮಲೆನಾಡಿನ ಟೂರಿಸಂ ಪ್ರದೇಶಗಳು, ಪರಿಸರ, ಗಿಡ ಮತ್ತು ಮರಗಳು, ಕಾಡು ಪ್ರಾಣಿಗಳ ಸಂರಕ್ಷಣೆಯ ಚಿತ್ರಗಳು ಗಮನ ಸೆಳೆಯುತ್ತಿವೆ. ಆಯಾ ಇಲಾಖೆಗಳ ಕಚೇರಿ ಮುಂಭಾಗದಲ್ಲಿ, ಇಲಾಖೆಗಳ ಕಾರ್ಯವೈಖರಿಗಳಿಗೆ ಸಂಬಂಧಪಟ್ಟ ಪೇಂಟಿಂಗ್ಗಳು ಹೆಚ್ಚಾಗಿ ಕಣ್ಮನ ಸೆಳೆಯುತ್ತಿವೆ.
ಓದಿ: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ: ಓರ್ವ ಆರೋಪಿ ಅರೆಸ್ಟ್
ಪಾಲಿಕೆಯು ಈ ಹಿಂದೆ ನಗರ ಸ್ವಚ್ಛತೆ, ಪರಿಸರ ಸಂರಕ್ಷಣೆ ಕುರಿತ ಗೋಡೆಗಳ ಮೇಲೆ ಬರೆಸಿದ ಸಂದೇಶಗಳಿಗಿಂತ ಈಗ ಗೋಡೆಗಳ ಮೇಲೆ ಬರೆಸಿದ ಚಿತ್ರಗಳು ಹೆಚ್ಚು ಗಮನ ಸೆಳೆಯುವಂತಿವೆ. ಪ್ರಮುಖವಾಗಿ ಪಾದಚಾರಿಗಳನ್ನ, ವಾಹನಗಳಲ್ಲಿ ಹೋಗುತ್ತಿರುವವರನ್ನು ಈ ಚಿತ್ರಗಳು ಬಹುಬೇಗ ಆಕರ್ಷಿಸುತ್ತಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ಗಳಿಸಿವೆ.