ಶಿವಮೊಗ್ಗ: ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿದೆ. ಮಲೆನಾಡಿನ ಯುವಕ ವಿಜೂ ವರ್ಗಿಸ್ ಅವರೀಗ ದೇಶ ಸುತ್ತಲು ಹೊರಟಿದ್ದಾರೆ. ಇವರು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಸಮೀಪದ ಕೆಂಚನಾಲದವರು. ಏಕಾಂಗಿಯಾಗಿ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಪ್ರವಾಸ ಹೋಗುವುದು ಇವರ ಹವ್ಯಾಸ. ಈ ಹವ್ಯಾಸಕ್ಕಾಗಿ ವಿಜೂ ಈಗ ಭಾರತ ಮಾತ್ರವಲ್ಲ, ನೇಪಾಳ ಹಾಗೂ ಭೂತಾನ್ ದೇಶಕ್ಕೆ ಭೇಟಿ ಕೊಡಲು ಹೊರಟಿದ್ದಾರೆ.
ಸಮಾನತೆಗಾಗಿ..: ವಿಜೂ ವರ್ಗೀಸ್ ಅವರು ಬೈಕ್‌ನಲ್ಲಿ ಏಕಾಂಗಿಯಾಗಿ ಪರ್ಯಾಟನೆಗೆ ಸುಮ್ಮನೆ ಹೊರಟಿಲ್ಲ. ರಕ್ತದಾನದ ಬಗ್ಗೆ ಅರಿವು, ದೇಶದಲ್ಲಿ ಎಲ್ಲರೂ ಸಮಾನರು, ಎಲ್ಲಾ ಜಾತಿ, ಧರ್ಮ ಒಂದೇ ಎಂಬ ಸಂದೇಶ ಹೊತ್ತು ಸಾಗುತ್ತಿದ್ದಾರೆ. ಬೈಕ್‌ನಲ್ಲಿಯೇ 60ಕ್ಕೂ ಹೆಚ್ಚು ದಿನಗಳ ಕಾಲ ಪರ್ಯಟನೆಗೆ ಹೊರಟಿದ್ದು, ಪ್ರತಿದಿನ ಕನಿಷ್ಟ 350 ರಿಂದ 400 ಕಿ.ಮೀ ಪ್ರಯಾಣಿಸುವ ಗುರಿ ಹೊಂದಿದ್ದಾರೆ.
ಇವರು ಹುಟ್ಟೂರಿನಿಂದ ಹೊರಟು ಮೊದಲು ತೆಲಂಗಾಣಕ್ಕೆ ತೆರಳಲಿದ್ದಾರೆ. ತೆಲಂಗಾಣದಿಂದ ಬೆಂಗಳೂರಿಗೆ ವಾಪಸ್ ಆಗುವರು. ಇಲ್ಲಿಂದ ಚೆನೈ, ಪಾಂಡಿಚೇರಿ, ಧನುಷ್ಕೋಡಿ, ಕನ್ಯಾಕುಮಾರಿ, ಕೇರಳ, ಮಂಗಳೂರು, ಉಡುಪಿ, ಕಾರವಾರದ ಮೂಲಕ ಗೋವಾ ರಾಜ್ಯ ಪ್ರವೇಶಿಸಿ ಅಲ್ಲಿಂದ ಮಹಾರಾಷ್ಟದ ಮೂಲಕ ರಾಜಸ್ಥಾನ, ಗುಜರಾತ್, ಹರಿಯಾಣ, ದೆಹಲಿ, ಕಾಶ್ಮೀರ, ಉತ್ತರಾಖಂಡ್ ಮಾರ್ಗವಾಗಿ ನೇಪಾಳ ಪ್ರವೇಶಿಸುವರು. ಬಳಿಕ ಭೂತಾನ್‌ನಿಂದ ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರದ ಮೂಲಕ ಕರ್ನಾಟಕಕ್ಕೆ ಮರಳಲಿದ್ದಾರೆ.
ವಿಶೇಷವೆಂದರೆ, ದೇಶ ಸುತ್ತುವುದರೊಂದಿಗೆ ಪ್ರತಿ ರಾಜ್ಯದ ಮಣ್ಣನ್ನೂ ಇವರು ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ಒಂದೊಂದು ಬಾಟಲಿ ಇಟ್ಟುಕೊಳ್ಳುವರು. ಈ ಮಣ್ಣನ್ನು ದೇಶದ ಪ್ರಸಿದ್ಧ ವ್ಯಕ್ತಿಗಳಿಗೆ ಉಡುಗೊರೆಯಾಗಿ ನೀಡುವ ಉದ್ದೇಶ ಹೊಂದಿದ್ದಾರೆ. ಅಂತಿಮವಾಗಿ ಮನುಷ್ಯ ಸತ್ತ ಮೇಲೆ ಹೋಗುವುದು ಮಣ್ಣಿಗೆ ಎಂಬುದೇ ಇದರ ಉದ್ದೇಶ ಎಂದು ಅವರು ಈಟಿವಿ ಭಾರತಕ್ಕೆ ತಿಳಿಸಿದರು.
ವಿಜೂ ವರ್ಗಿಸ್ ಅವರಿಗೆ ದೇಶ ಸುತ್ತಲು ಸಾಥ್ ನೀಡುತ್ತಿರುವುದು ರಾಯಲ್ ಎನ್‌ಫೀಲ್ಡ್ ಬೈಕ್. ಈ ಬೈಕ್ಅನ್ನು ದೂರ ಪ್ರಯಾಣಕ್ಕೆ ಬೇಕಾದಂತೆ ಅಣಿಗೊಳಿಸಿದ್ದಾರೆ. ಸಂಚಾರಕ್ಕೆ ಬೇಕಾದ ಪೆಟ್ರೋಲ್ ತುಂಬಲು ಎರಡು ಪ್ರತ್ಯೇಕ ಕ್ಯಾನ್ಗಳು, ಲಗೇಜ್‌ಗಾಗಿ ಪ್ರತ್ಯೇಕ ಬಾಕ್ಸ್ ಸೇರಿದಂತೆ ಮಣ್ಣು ಸಂಗ್ರಹಿಸಿಡಲು ದೊಡ್ಡ ಬಾಕ್ಸ್ ಫಿಟ್ ಮಾಡಿದ್ದಾರೆ. ಕ್ಯಾಮರಾ ಅಳವಡಿಕೆ, ಮೊಬೈಲ್ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬೈಕ್‌ನ ಎರಡು ಟೈಯರ್‌ಗಳ ಹವಾ ತಿಳಿಯುವ ಡಿಜಿಟಲ್ ವ್ಯವಸ್ಥೆ ಇದೆ. ಬೈಕ್‌ಗೆ ಕೂಲರ್ ಅಳವಡಿಸಲಾಗಿದೆ. ಗೇರ್ ಅನ್ನು ಬಲಭಾಗದಿಂದ ಎಡ ಭಾಗಕ್ಕೆ ಬದಲಾಯಿಸಿ ಕೊಡಲಾಗಿದೆ. ವಿಜೂ ವರ್ಗಿಸ್ ಕಳೆದ 9 ವರ್ಷದ ಹಿಂದೆ ಏಕಾಂಗಿಯಾಗಿ ದಕ್ಷಿಣ ಭಾರತ ಸುತ್ತಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: ಸ್ಪೂರ್ತಿದಾಯಕ ಕಥೆ.. ವಿವಿಧ ದೇಶದ ಸಂಸ್ಕೃತಿ, ಪುರಾಣ ಅರಿಯಲು ಬೈಕ್ ಮೇಲೆ ಜಗತ್ತು ಸುತ್ತುತ್ತಿರುವ ಇಟಾಲಿಯನ್ ಯುವತಿ