ಶಿವಮೊಗ್ಗ : ಯೋಗ್ಯ ನಾಯಕನನ್ನು ಹುಡುಕುವ ಯೋಗ್ಯತೆ ಇಲ್ಲದೇ ಇರುವ ಕಾಂಗ್ರೆಸ್ ಪಕ್ಷ ಮೋದಿಯವರನ್ನು ಮಣಿಸುವ ಕುರಿತು ಮಾತನಾಡುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಪಕ್ಷಕ್ಕೆ ಯೋಗ್ಯ ನಾಯಕನನ್ನು ಹುಡುಕುವ ಯೋಗತ್ಯೆ ಇಲ್ಲದೇ ಇರುವಾಗ ಮೋದಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಣಿಸುವ ಕುರಿತು ಮಾತನಾಡುವ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎನ್ನುವ ತಿರುಕನ ಕನಸು ಕಾಣುತ್ತಿದೆ. ಇದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಮೋದಿಗೆ ಜಗತ್ತು ಕೆಚ್ಚೆದೆಯ ನಾಯಕನಾಗಿ ನೋಡುತ್ತಿದೆ : ಇಡೀ ದೇಶ ಇಂದು ಮೋದಿಯವರನ್ನು ಸಂತನ ರೂಪದಲ್ಲಿ ನೋಡುತ್ತಿದ್ದರೆ, ಜಗತ್ತಿನ ರಾಷ್ಟ್ರಗಳು ಕೆಚ್ಚೆದೆಯ ನಾಯಕನಾಗಿ ನೋಡುತ್ತಿದೆ. ಇದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಹಾಗೂ ದೇಶದ ಜನರಿಗೆ ಸ್ವಾಭಿಮಾನ ತರುವ ವಿಚಾರ ಎಂದರು.
ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಅದಕ್ಕೆ ಮೋದಿಯವರ ನೇತೃತ್ವದ ಆಡಳಿತ ಕಾರಣ. ಕಾಂಗ್ರೆಸ್‌ನವರು ಕೇವಲ ಚುನಾವಣೆಗೋಸ್ಕರ ದೇಶದ ಜನರ ಕಲ್ಯಾಣ ಮಾಡುತ್ತೇವೆ ಎಂದು ದೇಶದ ಬಡವರನ್ನು ಬಡವರನ್ನಾಗಿಯೇ ಉಳಿಸಿದರು. ಆದರೆ, ಮೋದಿಯವರು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ಸಿಗುವಂತೆ ಆಡಳಿತ ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ ಡಿ ಮೇಘರಾಜ್, ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ, ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ ಎಸ್ ಅರುಣ್ ಸೇರಿ ಇತರರು ಉಪಸ್ಥಿತರಿದ್ದರು.
ಓದಿ: ಕೆಕೆಆರ್ಡಿಬಿ, ನಂಜುಂಡಪ್ಪ ವರದಿ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ಕೈಗೊಳ್ಳುತ್ತೇನೆ : ಸಿಎಂ ಬೊಮ್ಮಾಯಿ