ಶಿವಮೊಗ್ಗ: ನಮ್ಮ ದೇವಿ ಚೌಡಿ, ಚೌಡಮ್ಮನನ್ನು ವೈದಿಕರು ಚೌಡೇಶ್ವರಿ ಎಂದು ಬದಲಾಯಿಸಿದ್ದಾರೆ. ನಮ್ಮ ಶೂದ್ರ ಸಂಪ್ರದಾಯದ ಚೌಡಮ್ಮನ ಪೂಜೆಯನ್ನು ವೈದಿಕರಿಗೆ ವಹಿಸಿಕೊಟ್ಟಿದ್ದೇ ಈ ಸಮಸ್ಯೆಗೆ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ನಿನ್ನೆ ನಗರದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ನಡೆದ ಈಡಿಗ ಸಮುದಾಯದ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಚೌಡಿ, ಚೌಡಮ್ಮನನ್ನು ವೈದಿಕರು ಚೌಡೇಶ್ವರಿ ಎಂದು ಮಾಡಿದ್ದಾರೆ. ವೈದಿಕರಿಗೆ ಪೂಜೆ ಜವಾಬ್ದಾರಿ ನೀಡಿದ್ದೇ ತಪ್ಪು. ನಮ್ಮ ಗುರುಗಳಾದ ಗುರುನಾರಾಯಣ ಅವರ ಶಿವಗಿರಿಯಲ್ಲಿ ತರಬೇತಿ ಪಡೆದವರನ್ನು ಪೂಜೆಗೆ ನೇಮಕ ಮಾಡಿದ್ರೆ ಇಷ್ಟೊಂದು ಸಮಸ್ಯೆ ಬರುತ್ತಿರಲಿಲ್ಲ ಎಂದರು.
ದೇವಾಲಯವನ್ನು ಈ ರೀತಿ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ. ಹಾಗಾಗಿ ಸಮಾಜದವರು ಹೋರಾಟ ನಡೆಸಬೇಕಿದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡುವೆ ಎಂದು ತಿಳಿಸಿದರು.