ಶಿವಮೊಗ್ಗ: ಕುಮದ್ವತಿ ಉಗಮವಾಗುವ ತೀರ್ಥದ ಕೊಳದಲ್ಲಿ ಅಪ್ರಕಟಿತ ಶಿಲಾ ಶಾಸನ ಪತ್ತೆಯಾಗಿದೆ.
ಹೊಸನಗರ ತಾಲೂಕು ಜೈನರ ಪ್ರವಿತ್ರ ಕ್ಷೇತ್ರ ಹುಂಚದ ಬಳಿ ಕುಮದ್ವತಿ ನದಿ ಉಗಮವಾಗುತ್ತದೆ. ನದಿ ಉಗಮವಾಗುವ ಸ್ಥಳದಲ್ಲಿ ಕಲ್ಲಿನಲ್ಲಿ ಒಂದು ಕೊಳ ಕಟ್ಟಲಾಗಿದೆ. ಈ ಕೊಳ ಕಲ್ಲಿನ ಪುಷ್ಕರಣಿಯಾಗಿದೆ. ಇದರ ನಾಲ್ಕು ದಿಕ್ಕಿನಿಂದ ಇಳಿದು ಹತ್ತಲು ಮೆಟ್ಟಿಲುಗಳಿವೆ. ಸುಂದರ ಶಿಲ್ಪಕಲಾ ಕೆತ್ತನೆಯ ಮೆಟ್ಟಿಲು ಹಾಗೂ ಗಜ ಶಿಲ್ಪಗಳಿವೆ. ಕೊಳದ ಒಂದು ಬಾಗದಲ್ಲಿ ಮೆಟ್ಟಿಲಿನಿಂದ ಹೊರಚಾಚಿದಂತೆ ಗೋಮುಖ ಶಿಲಾ ಪ್ರನಾಳದಿಂದ ಕುಮದ್ವತಿ ನದಿಯ ನೀರು ಉಗಮವಾಗಿ ಬರುತ್ತದೆ. ಈ ಕೊಳದಿಂದ ಹೊಂಬುಜದ ಎಲ್ಲಾ ಜೈನ ಬಸದಿಗಳ ಪೂಜೆಗೆ ನೀರನ್ನು ತೆಗೆದು ಕೊಂಡು ಹೋಗಲಾಗುತ್ತದೆ.
ಈ ಕೊಳದಲ್ಲಿ ಅಪ್ರಕಟಿತ " ಕುಮುದ ಹೊಳೆ" ಎಂದು ಹಳೆಗನ್ನಡದ ಏಕ ರೂಪದ ಶಿಲಾ ಶಾಸನ ಲಭ್ಯವಾಗಿದೆ. ಈ ಶಿಲಾ ಶಾಸನವನ್ನು ಇತಿಹಾಸ ಅಕಾಡೆಮಿ ಸದಸ್ಯರಾದ ಎಚ್.ಆರ್.ಪಾಂಡುರಂಗ ಹಾಗೂ ವೇಮಗಲ್ ಮೂರ್ತಿ ಮತ್ತು ಮುತ್ತುರಾಜ್ ಪತ್ತೆ ಹಚ್ಚಿದ್ದಾರೆ. ಹುಂಚ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಇದುವರೆಗೂ 37 ಶಾಸನಗಳು ಪತ್ತೆಯಾಗಿವೆ. ಇದು 38 ನೇ ಶಾಸನವಾಗಿದೆ.
ಈ ಕೊಳವನ್ನು 11 ನೇ ಶತಮಾನದಲ್ಲಿ ತ್ರೈಲೋಕ್ಯ ಮಲ್ಲವೀರ ಶಾಂತರ ದೇವನ ವಾಣಿಜ್ಯ ವ್ಯವಹಾರದ ಮುಖ್ಯಸ್ಥ ನಖರಮುಖ ಮಂಡನೆಂದು ಪ್ರಸಿದ್ದನಾದ ಪೊಂಬುರ್ಜದ ಪಟ್ಟಣದ ಸ್ವಾಮಿ ನೂಕ್ಕಯ್ಯ ಶೆಟ್ಟಿ ಕ್ರಿ.ಶ. 1062 ರಲ್ಲಿ ಕಟ್ಟಿಸಿದನೆಂದು ತಿಳಿದು ಬಂದಿದೆ.