ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಮೃತ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಹಾಗೂ ಯುಜಿಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಪಾಲಿಕೆಯ ಎಲ್ಲಾ ಸದಸ್ಯರು ಹಾಜರಿದ್ದರು.
ಕೆಲ ಕಡೆ ಕಾಮಗಾರಿ ಪ್ರಾರಂಭಿಸಿಯೇ ಇಲ್ಲ. ದಾಖಲೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದರ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತೋ ಅಲ್ಲಿ ಸಮಸ್ಯೆ ಬಗೆಹರಿದಿದೆ. ಪಾಲಿಕೆಗೆ ಸೇರ್ಪಡೆಯಾದ ಭಾಗಗಳಲ್ಲಿ ಸಮಸ್ಯೆ ಇದೆ. ಅದನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 21 ಸಾವಿರ ಅನಧಿಕೃತ ನೀರಿನ ಸಂಪರ್ಕ ಹೊಂದಿರುವ ಮಾಹಿತಿ ಇದೆ. ಅಕ್ರಮ ನೀರಿನ ಸಂಪರ್ಕ ಪಡೆದುಕೊಂಡವರು ಸಕ್ರಮ ಮಾಡಲು ಪಾಲಿಕೆಗೆ 2,800 ರೂ. ಪಾವತಿ ಮಾಡಬೇಕು. ಯಾವ ಭಾಗದಲ್ಲಿ ಯುಜಿಡಿ ಕಾಮಗಾರಿ ಪೂರ್ಣವಾಗಿದೆ ಅಲ್ಲಿ ಪ್ರತಿ ಮನೆಯವರು ಪಾಲಿಕೆಗೆ 300 ರೂ. ಶುಲ್ಕ ಪಾವತಿಸಿ ಸಂಪರ್ಕ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅವರ ಕುಡಿಯುವ ನೀರಿನ ಸಂಪರ್ಕ ಬಂದ್ ಮಾಡಲಾಗುವುದು ಎಂದು ತಿಳಿಸಿದರು.