ಶಿವಮೊಗ್ಗ: ಅಬಕಾರಿ ಅಧಿಕಾರಿಗಳು ಮತ್ತು ಸೊರಬ, ರಿಪ್ಪನಪೇಟೆ ಪೊಲೀಸರು ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಕಡೆ ಪ್ರತ್ಯೇಕವಾಗಿ ದಾಳಿ ನಡೆಸಿ, 86 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೊರಬ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್ಚೆ ಗ್ರಾಮದ ಜಯ್ಯಪ್ಪ ಎಂಬುವರ ಜಮೀನಿನ ಮೇಲೆ ದಾಳಿ ನಡೆಸಿ 20 ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಜಯ್ಯಪ್ಪ ಪರಾರಿಯಾಗಿದ್ದಾನೆ.
ಇನ್ನು ಹೊಸನಗರ ತಾಲೂಕು ರಿಪ್ಪನಪೇಟೆ ಪೊಲೀಸರು ದಾಳಿ ನಡೆಸಿ, ಬೆಳ್ಳೂರು ಗ್ರಾಮದ ಲೋಕೇಶ್ ಎಂಬಾತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 55 ಹಸಿ ಗಾಂಜಾ ಗಿಡಗಳನ್ನ್ನುನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಅಬಕಾರಿ ಅಧಿಕಾರಿಗಳ ದಾಳಿ: ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಶಿವಮೊಗ್ಗ ತಾಲೂಕು ಗಾಜನೂರು ಸಮೀಪದ ಮೂಡಲಮನೆ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ 11 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕ ಶ್ರೀನಾಥ್ ಹಾಗೂ ಅವರ ತಂಡ ದಾಳಿ ನಡೆಸಿ, 75 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ.