ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ತುಂಗಾ ನದಿ ತೀರವನ್ನು ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ 15 ದಿನಗಳ ಒಳಗಾಗಿ ಕಾರ್ಯಾದೇಶ ನೀಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆಯಡಿ ತುಂಗಾ ನದಿಯ ಹಳೆಯ ಸೇತುವೆಯಿಂದ ಆರಂಭಿಸಿ ಹೊಸ ಸೇತುವೆಯವರೆಗಿನ 2.6 ಕಿಮಿ ಪ್ರದೇಶದ 6.5 ಹೆಕ್ಟೇರ್ ವ್ಯಾಪ್ತಿಯಲ್ಲಿ ನಾಗರಿಕರಿಗೆ ಅನುಕೂಲವಾಗುವಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳು, ವಾಕಿಂಗ್ ಟ್ರಾಕ್‍ಗಳು, ಕಮರ್ಷಿಯಲ್ ಪ್ಲಾಜಾಗಳು, ಸೈಕಲ್ ಟ್ರಾಕ್, ಫುಟ್‍ಪಾತ್, ಮಾಹಿತಿ ಕೇಂದ್ರ, ಜೆಟ್ಟಿಗಳು, ಗಣಪತಿ ವಿಸರ್ಜನೆಗೆ ಕೆರೆ ನಿರ್ಮಾಣ ಸೇರಿದಂತೆ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ ಎಂದರು.
ಇದಲ್ಲದೆ, ಬಯಲು ರಂಗಮಂದಿರ, ವೀಕ್ಷಣಾ ಗೋಪುರ, ಮಕ್ಕಳಿಗೆ ಆಟವಾಡುವ ತಾಣಗಳು, ಉದ್ಯಾನವನ, ಶಿವಮೊಗ್ಗ ನಗರದ ಇತಿಹಾಸವನ್ನು ಬಿಂಬಿಸುವ ಮ್ಯೂರಲ್ ಪೈಂಟಿಂಗ್‍ಗಳು, ಲೈಟಿಂಗ್, ಕ್ರಾಸಿಂಗ್ ಬ್ರಿಡ್ಜ್, ಜಿಮ್ ಸೌಲಭ್ಯ ಒದಗಿಸಲಾಗುವುದು. ಹಲವು ಪ್ರಸಿದ್ಧ ನಗರಗಳಲ್ಲಿ ನದಿ ದಂಡೆಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.