ಶಿವಮೊಗ್ಗ: ನಗರದಲ್ಲಿ ನಡೆಯುತ್ತಿರುವ ಹತ್ತು ಹಲವು ಕಾಮಗಾರಿಗಳಿಂದ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮತ್ತಷ್ಟು ದುಸ್ಥರವಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ನಗರ ಜನಸಂಖ್ಯೆ, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಲು-ಸಾಲು ಬಹುಮಹಡಿ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ ಇದಕ್ಕನುಗುಣವಾಗಿ ಆಡಳಿತ ವ್ಯವಸ್ಥೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ನಗರದ ಕುವೆಂಪು ರಸ್ತೆ, ದುರ್ಗಿಗುಡಿ, ತಿಲಕ್ ನಗರ, ಆರ್ಟಿಓ ರಸ್ತೆ, ಸಾಗರ ರಸ್ತೆ, ಜೈಲ್ ರಸ್ತೆ, ಗಾರ್ಡನ್ ಏರಿಯಾ ಸೇರಿದಂತೆ ಹಲವು ಕಡೆ ಟ್ರಾಫಿಕ್ ಸಮಸ್ಯೆ ತಲೆದೊರಿದ್ದು, ಪ್ರತಿನಿತ್ಯ ಜನರು ಸಮಸ್ಯೆ ಅನುಭವಿಸುವಂತಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ಹಾಗೂ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಿಂದಾಗಿ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಅನುಭವಿಸುವಂತಾಗಿದೆ. ಒಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವುದರಿಂದ ವಾಹನ ಸಂಚಾರ ದಟ್ಟಣೆಯಾದರೆ. ನಗರದ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಗೆ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡದೇ ಇರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿವೆ. ಇಷ್ಟಾದರೂ ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಆಗಲಿ, ಪೊಲೀಸ್ ಇಲಾಖೆ ಆಗಲಿ ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಹರಿಸಿ ಸಮಸ್ಯೆ ಕಡಿಮೆ ಮಾಡಲು ಕನ್ಸರ್ ವೇನ್ಸಿಗಳನ್ನು ಗುರುತಿಸಿದ್ದು, ಟ್ರಾಫಿಕ್ ಸಮಸ್ಯೆ ಆಗದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತರು.
ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಚಾರುಲತಾ ಸೋಮಲ್ ಅವರು ಬಹುಮಹಡಿ ವಾಣಿಜ್ಯ ಸಂಕೀರ್ಣ, ಆಸ್ಪತ್ರೆಗಳಲ್ಲಿ ವಾಹನಗಳ ನಿಲುಗಡೆಗೆ ಮೀಸಲಿರಿಸಿದ್ದ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದರ ವಿರುದ್ಧ ಸಮರ ಸಾರಿದ್ದರು.ಕಟ್ಟಡ ಹಾಗೂ ಆಸ್ಪತ್ರೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಹಲವು ಕಡೆಗಳಲ್ಲಿ ತಾವೇ ಮುಂದೆ ನಿಂತು ಪಾರ್ಕಿಂಗ್ ಸ್ಥಳಗಳನ್ನು ತೆರವುಗೊಳಿಸಿದ್ದರು. ಆಯುಕ್ತರ ದಿಟ್ಟ ಕ್ರಮದಿಂದಾಗಿ ಕಟ್ಟಡ ಮಾಲೀಕರು ಹಾಗೂ ಆಸ್ಪತ್ರೆಯ ಮಾಲಿಕರು ತಮ್ಮ ಕಟ್ಟಡಗಳಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಿದ್ದರು. ಆದರೆ, ಇವರು ವರ್ಗಾವಣೆಯಾಗುತ್ತಿದಂತೆ ನಗರದ ಹಲವು ಕಟ್ಟಡದ ಪಾರ್ಕಿಂಗ್ ಸೆಲ್ಲಾರ್ಗಳು ಮತ್ತೆ ಅನ್ಯ ಉದ್ದೇಶಗಳಿಗೆ ಬಳಕೆ ಆಗುತ್ತಿದ್ದು, ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಹಾಗಾಗಿ ಕೂಡಲೇ ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿರುವ ಆಸ್ಪತ್ರೆ ಮಾಲೀಕರಿಗೆ ಹಾಗು ಬಹು ಮಹಡಿ ಕಟ್ಟಡದ ಮಾಲೀಕರಿಗೆ ತಮ್ಮಲ್ಲಿ ಬರುವ ಗ್ರಾಹಕರಿಗೆ ಹಾಗು ರೋಗಿಗಳ ವಾಹನಗಳಿಗೆ ಟ್ರಾಫಿಕ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸುವಂತೆ ಮಹಾನಗರ ಪಾಲಿಕೆ ನೋಟಿಸ್ ನೀಡಬೇಕು ಹಾಗೂ ಯಾರ ಒತ್ತಡಕ್ಕೂ ಮಣಿಯದೇ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆಗಳಿಗೆ ಸೂಚಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.