ಶಿವಮೊಗ್ಗ: ಪದವೀಧರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ನಮ್ಮ ತಂಡದ ಸದಸ್ಯರನ್ನು ಗೆಲ್ಲಿಸಿಕೊಡಬೇಕೆಂದು ಮಾಜಿ ಅಧ್ಯಕ್ಷ ಎಸ್.ಪಿ. ದಿನೇಶ್ ಮನವಿ ಮಾಡಿದರು.
ನಿನ್ನೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,13 ಸ್ಥಾನಕ್ಕೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ನಮ್ಮ ತಂಡದ 9 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ. ಅವರವರ ಮೀಸಲಾತಿಗೆ ಅನ್ವಯ ಚುನಾವಣೆ ನಡೆಯುತ್ತಿದ್ದು, ಬಿಸಿಎಂ(ಬಿ)ಮೀಸಲು ಸ್ಥಾನಕ್ಕೆ ಯು.ಚಂದ್ರಶೇಖರಪ್ಪ, ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಟಿ.ಜಗದೀಶ್, ಮಹಿಳಾ ಮೀಸಲು ಸ್ಥಾನಕ್ಕೆ ಡಿ.ಎಸ್, ಭುವನೇಶ್ವರಿ, ಎಸ್.ಮಮತಾ ಸ್ಪರ್ಧಿಸಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಆದ ಹೊಸ ಸದಸ್ಯರು ಹೊರತುಪಡಿಸಿ ಒಟ್ಟು 6024 ಸದಸ್ಯರು ಮತಚಲಾಯಿಸುವ ಹಕ್ಕನ್ನು ಪಡೆದಿದ್ದು, ಸಹಕಾರ ಕಾಯ್ದೆಯ ಹೊಸ ನಿಯಮದಂತೆ ಸಾವಿರಾರು ಸದಸ್ಯರು ಮತದಾನದ ಹಕ್ಕನ್ನು ಚಲಾಯಿಸುವಂತಿರಲಿಲ್ಲ. ಸಂಘದ ಹಿರಿಯರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೋರ್ಟ್ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದೆ. ನಿರ್ದೆಶಕರ ಸ್ಥಾನಕ್ಕೆ ಈ ಹಿಂದಿನ ಅವಧಿಯ ಎಲ್ಲಾ ನಿರ್ದೇಶಕರು ಒಟ್ಟಾಗಿ ಸ್ಪರ್ಧಿಸುತ್ತಿದ್ದೇವೆ ಎಂದರು.
ಸಂಘವು 50ನೇ ವರ್ಷದ ಹೊಸ್ತಿಲಲ್ಲಿದ್ದು, ಸುವರ್ಣ ಮುಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂಭ್ರಮದ ಸವಿನೆನಪಿಗಾಗಿ ಹಲವು ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವ ಬದ್ಧತೆ ನಮ್ಮಲ್ಲಿದೆ. ಸಂಘವು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಅನುವು ಮಾಡಿಕೊಡಬೇಕು. ಸದಸ್ಯರಿಗೆ ಇನ್ನಷ್ಟು ಸವಲತ್ತು ಹಾಗೂ ಸೌಲಭ್ಯ ದೊರಕಿಸಿ ಕೊಡಲು ನಮ್ಮ ತಂಡವನ್ನು ಬೆಂಬಲಿಸಿ ಮತ ನೀಡುವ ಮೂಲಕ ಸೇವೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಯು. ಚಂದ್ರಶೇಖರಪ್ಪ, ಡಿ.ಎಸ್.ಭುವನೇಶ್ವರಿ, ಎಸ್.ಮಮತಾ, ಟಿ.ಜಗದೀಶ್ ಅವಿರೋಧವಾಗಿ ಆಯ್ಕೆಯಾದ ಎಸ್.ರಾಜಶೇಖರ್, ಯು.ರಮ್ಯಾ, ಎಸ್.ಕೆ. ಕೃಷ್ಣಮೂರ್ತಿ, ಹೆಚ್.ಸಿ.ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.