ಶಿವಮೊಗ್ಗ : ಅಡ್ವಾಣಿ ಅವರ ನೇತೃತ್ವದ ರಥಯಾತ್ರೆಯ ಸಂದರ್ಭದಲ್ಲೂ ನರೇಂದ್ರ ಮೋದಿಯವರು ಶ್ರೀರಾಮ ಮಂದಿರಕ್ಕಾಗಿ ಕಾರ್ಯ ನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಹಾಗೂ ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ನೀಡಿದ ಸಹಕಾರದಿಂದಾಗಿ ಇಂದು ಬೃಹತ್ ಮಂದಿರ ನಿರ್ಮಾಣವಾಗುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ಹೇಳಿದರು.
ಇವರು ಭದ್ರಾವತಿಯ ಧರ್ಮ ಶ್ರೀ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್, ವಿಶ್ವಭಾರತ ವಿಶ್ವಸ್ಥ ಮಂಡಳಿ ವತಿಯಿಂದ ಆಯೋಜಿಸಿದ್ದ 38ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಧರ್ಮಶ್ರೀ ಸಭಾಭವನದ ಮಹಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಸಂಘಟನೆಯ ಸಹಕಾರದಿಂದ ಹಲವು ಕೆಲಸಗಳನ್ನು ಮಾಡಲಾಗಿದೆ. ಸಂಘಟನೆ ನನ್ನನ್ನು ಗೆಲ್ಲಿಸಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನಿಮ್ಮ ಸೇವೆ ಮಾಡುವ ಅವಕಾಶ ನನ್ನದು. ಎಲ್ಲರೂ ಜಾತಿಭೇದ ಮರೆತು ನಮ್ಮ ದೇಶದ ಮೇಲಿನ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕಿದೆ. ಇದಕ್ಕೆ ಸಂಘಟನೆಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆಂಕಟರಮಣ ಶೇಟ್, ಕ್ಷೇತ್ರೀಯ ಕಾರ್ಯದರ್ಶಿಗಳಾದ ಕೇಶವ ಹೆಗಡೆ, ರಾಮಪ್ಪ, ನರೇಂದ್ರ ಭಟ್, ಮಾತೃ ಮಂಡಳಿಯ ಸದಸ್ಯರು, ನಗರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಇನ್ನಿತರ ಮುಖಂಡರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಓದಿ : ಕರೆಂಟ್ಗಾಗಿ ಮಾಡಿದ ಮನವಿ ವ್ಯರ್ಥ.. 6 ತಿಂಗಳಿಂದ ಮೆಸ್ಕಾಂ ಕಚೇರಿಗೇ ಮಿಕ್ಸಿ ತಂದು ಮಸಾಲೆ ರುಬ್ಬುವ ರೈತ