ಶಿವಮೊಗ್ಗ: 'ತುಂಗಾ ಪಾನ, ಗಂಗಾ ಸ್ನಾನ' ಎಂಬುದು ಪುರಾತನ ನಾಣ್ಣುಡಿ. ಗಂಗೆ ಸ್ನಾನಕ್ಕೆ ಎಷ್ಟು ಪವಿತ್ರಳೋ, ತುಂಗಾ ನದಿ ನೀರು ಅಷ್ಟೇ ಸಿಹಿ, ಶ್ರೇಷ್ಠ. ಆದರಿಂದು ತುಂಗೆ ಮಲಿನಗೊಂಡಿದ್ದಾಳೆ. ಒಂದು ಮಾತಿನಲ್ಲಿ ಹೇಳುವುದಾದರೆ ನದಿ ಮಲಿನಗೊಂಡಿಲ್ಲ. ನಾವೇ ಮಲಿನ ಮಾಡಿದ್ದೇವೆ.
ಕುಂಟುತ್ತಾ ಸಾಗುತ್ತಿದೆ ಶುದ್ಧೀಕರಣ ಘಟಕ ಕಾಮಗಾರಿ: ನಗರದ ಮಧ್ಯ ಭಾಗದಲ್ಲಿ ಹರಿಯುವ ತುಂಗೆಗೆ ನಗರದ ರಾಜಕಾಲುವೆ ಹಾಗೂ ಚರಂಡಿಯ ಕೊಳಚೆ ನೀರು ಹರಿಯುತ್ತಿರುವುದೇ ಅದಕ್ಕೆ ಪ್ರಮುಖ ಕಾರಣ. ಇದರಿಂದ ನದಿ ನೀರು ವಿಷವಾಗಿ ಮಾರ್ಪಡುತ್ತಿದೆ.
ಇದನ್ನೂ ಓದಿ...ಕಬ್ಬಿಣದ ದರ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವ ಯೋಜನೆ ರೂಪಿಸಿ ಸುಮಾರು 10 ವರ್ಷಗಳೇ ಕಳೆದಿವೆ. ಆದರೆ ಇನ್ನೂ ಕಾಮಗಾರಿ ಮುಗಿದಿಲ್ಲ. ನಗರದ ಒಂದು ಭಾಗದ ಕೊಳಚೆ ನೀರನ್ನು ಮಾತ್ರ ಸದ್ಯ ತಾವರೆ ಚಟ್ನಳ್ಳಿಯಲ್ಲಿ ಶುದ್ಧೀಕರಿಸಿ ನದಿಗೆ ಬಿಡಲಾಗುತ್ತದೆ.
ಶಿವಮೊಗ್ಗದ ಇತರೆ ಭಾಗದ ಚರಂಡಿ ನೀರು ಶುದ್ಧೀಕರಿಸಲು ಪುರಲೆ ಬಡಾವಣೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ಅಮೃತ ಯೋಜನೆಯಡಿ ಕಾಮಗಾರಿ ನಡೆಸಲಾಗುತ್ತಿದೆ. ತಾವರೆ ಚಟ್ನಳ್ಳಿಯ ಎಸ್ಟಿಪಿ ಟ್ಯಾಂಕ್ 35.58 ಎಂಎಲ್ಡಿ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಪುರಲೆಯ ಎಸ್ಟಿಪಿ ಟ್ಯಾಂಕ್ 51.13 ಎಂಎಲ್ಡಿ ನೀರು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ.