ಶಿವಮೊಗ್ಗ: ಸೊರಬ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೂರನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸುವ ಮೂಲಕ ತಮ್ಮಲ್ಲಿಯೇ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ.
ಅಧ್ಯಕ್ಷರಾಗಿ ಜಯಶೀಲಪ್ಪ ಹಾಗೂ ಉಪಾಧ್ಯಕ್ಷರಾಗಿ ಜೆ. ಪ್ರಕಾಶ್ ಹಳೇಸೊರಬ ಆಯ್ಕೆಯಾಗಿದ್ದಾರೆ. ಮೂರು ನಾಮನಿರ್ದೇಶಿತರು ಸೇರಿದಂತೆ ಒಟ್ಟು 16 ಸಂಖ್ಯಾ ಬಲವುಳ್ಳ ಇಲ್ಲಿನ ಎಪಿಎಂಸಿಯಲ್ಲಿ 9 ಜೆಡಿಎಸ್ ಬೆಂಬಲಿತ ಹಾಗೂ 7 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ 9 ಮತಗಳನ್ನು ಪಡೆದು ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಶಿವರಾಜ್‍ಗೌಡ 7 ಮತಗಳಿಗೆ ತೃಪ್ತಿ ಪಟ್ಟುಕೊಂಡರು.
ಲಾಟರಿಯಲ್ಲಿ ಒಲಿದ ಉಪಾಧ್ಯಕ್ಷ ಸ್ಥಾನ:
ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ. ಪ್ರಕಾಶ್ ಹಾಗೂ ವೈ.ಎಂ. ನಾಗರಾಜ್ ಹುರಳೀಕೊಪ್ಪ ಸ್ಪರ್ಧಿಸಿದ್ದರು. ಜೆಡಿಎಸ್ ಬೆಂಬಲಿತ ಸದಸ್ಯರೊಬ್ಬರು ಅಡ್ಡ ಮತದಾನ ಮಾಡಿದ ಪರಿಣಾಮ ತಲಾ 8 ಮತಗಳು ಲಭಿಸಿದವು. ಈ ವೇಳೆ ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಲಾಟರಿ ಎತ್ತುವ ಮೂಲಕ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಈ ವೇಳೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ. ಪ್ರಕಾಶ್ ಹಳೇಸೊರಬ ಗೆಲವು ಸಾಧಿಸಿದರು.
ಬಿಜೆಪಿಗೆ ನಿರಾಸೆ..!
ಎಪಿಎಂಸಿ ಗದ್ದುಗೆ ಏರುವ ತವಕದಲ್ಲಿದ್ದ ಬಿಜೆಪಿಗೆ ನಿರಾಸೆ ಎದುರಾಯಿತು. ಹಲವು ರೀತಿಯ ಕಾರ್ಯತಂತ್ರಗಳನ್ನು ರೂಪಿಸಿ, ಅಧಿಕಾರವನ್ನು ಹಿಡಿಯಲೇಬೇಕು ಎಂದುಕೊಂಡಿದ್ದ ಬಿಜೆಪಿ, ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಯತ್ನವನ್ನೂ ನಡೆಸಿತ್ತು ಎನ್ನಲಾಗುತ್ತಿದೆ. ಆದರೆ, ಜೆಡಿಎಸ್ ಬೆಂಬಲಿತರು ಒಗ್ಗಟ್ಟಾಗಿರುವ ಮೂಲಕ ಮಧು ಬಂಗಾರಪ್ಪ ಅವರ ರಾಜಕೀಯ ಶಕ್ತಿಯನ್ನು ಪುನಃ ಪ್ರದರ್ಶಿಸಿದರು. ಹಾಲಿ ಅಧ್ಯಕ್ಷ ಕೆ. ಅಜ್ಜಪ್ಪ ಅವರ ಅಧಿಕಾರ ಅವಧಿ ಜು. 14ಕ್ಕೆ ಕೊನೆಗೊಳ್ಳಲಿದೆ.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ನಫೀಸಾ ಬೇಗಂ, ಸಹಾಯಕ ಚುನಾವಣಾಧಿಕಾರಿಯಾಗಿ ಶಿರಸ್ತೆದಾರ್ ಎಂ.ಎಸ್. ಶಿವಪ್ರಸಾದ್, ಎಪಿಎಂಸಿ ಕಾರ್ಯದರ್ಶಿ ಆಶಾ ಕಾರ್ಯನಿರ್ವಹಿಸಿದರು. ಜೆಡಿಎಸ್ ಬೆಂಬಲಿತರು ಜಯ ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಮಧು ಬಂಗಾರಪ್ಪ ಅಭಿಮಾನಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಶಿವಲಿಂಗೇಗೌಡ, ಜೆಡಿಎಸ್ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರೇಗೌಡ, ಎಪಿಎಂಸಿ ಅಧ್ಯಕ್ಷ ಕೆ. ಅಜ್ಜಪ್ಪ, ಉಪಾಧ್ಯಕ್ಷ ನೀಲಕಂಠಗೌಡ, ಸದಸ್ಯರಾದ ಎಲ್.ಜಿ. ರಾಜಶೇಖರ್, ಜಯಶೀಲಗೌಡ, ಶಾಂತಮ್ಮ ಉಳವಿ ಸೇರಿದಂತೆ ಜೆಡಿಎಸ್ ಮುಖಂಡರು, ಮಧುಬಂಗಾರಪ್ಪ ಅಭಿಮಾನಿಗಳು ಇದ್ದರು.