ಶಿವಮೊಗ್ಗ: ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತವಾಗಿದೆ. ಶನಿವಾರ ಸಾಗರ ತಾಲೂಕು ಶಿರವಾಳ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತವಾಗುವಾಗ, ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವನೀಯ ಭಾರಿ ಅನಾಹುತ ತಪ್ಪಿದೆ. ಆದ್ರೆ ಬಡ ವ್ಯಕ್ತಿ ತನಗಿದ್ದ ಮನೆಯೂ ಇಲ್ಲದಂತಾಗಿದೆ. ತನಗೊಂದು ಸೂರು ಒದಗಿಸಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ.
ಶಿರವಾಳ ಗ್ರಾಮದ ನಾಗರಾಜ್ ಎಂಬುವರ ಮನೆ ಕುಸಿದಿದೆ. ಮನೆ ಕುಸಿಯುವಾಗ ಶಬ್ದ ಕೇಳಿದ ಎದುರು ಮನೆಯ ಮಂಜುನಾಥ್ ಅವರು ತಕ್ಷಣ ಮನೆಯಲ್ಲಿ ಇದ್ದ ನಾಗರಾಜ್ ಅವರ ಪುತ್ರಿಯನ್ನು ಹೊರಗೆ ತರುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ನಾಗರಾಜ್ ಅವರ ಪುತ್ರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ:
ಮಾಹಿತಿ ಪಡೆದ ಅಗ್ನಿಶಾಮಕದಳ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಮನೆಯಲ್ಲಿದ್ದ ವಸ್ತುಗಳನ್ನು ಸ್ಥಳೀಯರ ಸಹಕಾರದಿಂದ ಹೊರತರುವ ಕಾರ್ಯಾಚರಣೆ ನಡೆಸಿದರು.
'ತಮಗೊಂದು ಸೂರು ಒದಗಿಸಿ'
ನಾಗರಾಜ್ ಅವರು ಸ್ಥಳೀಯ ಎಪಿಎಂಸಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಗೊಂದು ಮನೆ ಬೇಕು ಅಂತ ಗ್ರಾಮ ಪಂಚಾಯತ್ಗೆ ಸಾಕಷ್ಟು ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತಮಗೊಂದು ಸೂರು ಬೇಕು ಅಂತ ಕಣ್ಣೀರು ಹಾಕಿದ್ದಾರೆ.
ನಾಗರಾಜ್ ಕುಟುಂಬಕ್ಕೆ ಪರಿಹಾರ:
ಸ್ಥಳೀಯರ ಮಾಹಿತಿಯ ಪ್ರಕಾರ ನಾಗರಾಜ ಅವರ ಪುತ್ರ ಕಳೆದ ಎರಡು ವರ್ಷಗಳ ಹಿಂದೆ ನಾಯಿ ಕಡಿತದಿಂದ ಮೃತಪಟ್ಟಿದ್ದ. ಈಗ ಈ ಅನಾಹುತ ನಾಗರಾಜ್ ಅವರಿಗೆ ತುಂಬಲಾರದ ನಷ್ಟವಾಗಿದೆ. ಸರ್ಕಾರ ತಕ್ಷಣ ಈ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊಡಗು: ಜೀವಕ್ಕೆ ಅಪಾಯ ಇದ್ರೂ ಮನೆ ಬಿಡಲ್ಲ ಅಂತಿರೋದ್ಯಾಕೆ?