ಶಿವಮೊಗ್ಗ: ಭಾನುವಾರ ಸಂಜೆ ನಗರದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದ ಘಟನೆ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಈಗ ಪರಿಸ್ಥಿತಿ ಶಾಂತವಾಗಿದೆ.
ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ: ಕಲ್ಲು ತೂರಾಟ ಗಲಾಟೆಯಲ್ಲಿ ಐದಾರು ಜನರಿಗೆ ಗಾಯಗಳಾಗಿವೆ. ಎಸ್ಪಿ ಮಿಥುನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಲ್ಲು ತೂರಾಟ ಹತೋಟಿಗೆ ಬಾರದೇ ಹೋದಾಗ ಪೊಲೀಸರು ರಾಗಿಗುಡ್ಡಕ್ಕೆ ಸೀಮಿತವಾಗಿ 144 ಸೆಕ್ಷನ್ ಜಾರಿಗೊಳಿಸಿ, ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮೇಲೆಯೂ ಕಲ್ಲು ತೂರಾಟ: ಗಲಾಟೆ ನಡೆದ ಸ್ಥಳಗಳಿಗೆ ಮಿಥುನ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಕೆಲ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆಸಲಾಗುತ್ತಿತ್ತು. ಪೊಲೀಸರು ಹೋಗುತ್ತಿದ್ದಂತಯೇ ಅವರ ಮೇಲೆಯೂ ಕಲ್ಲು ಬೀಸಿದರು. ಇದರಿಂದ ಪೊಲೀಸರು ಅಲ್ಲಿಂದ ವಾಪಸ್ ಆಗಬೇಕಾಯಿತು. ಆದರೆ, ಹೆಚ್ಚುವರಿ ಪೊಲೀಸ್ ಬಲಗಳೊಂದಿಗೆ ಉದ್ವಿಗ್ನ ಪರಿಸ್ಥಿತಿ ತಲೆದೊರಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ವಶಕ್ಕೆ: ಗಲಾಟೆಗೆ ಕಾರಣ ಯಾರು ಎಂಬುದನ್ನು ಗುರುತಿಸಿರುವ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಅಷ್ಟೋತ್ತಿಗಾಗಲೇ ಸುಮಾರು 7 ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಮನೆ ಮುಂದೆ ನಿಲ್ಲಿಸಿದ ಆಟೋ, ಕಾರು, ಬೈಕ್ಗಳಿಗೂ ಹಾನಿಯಾಗಿವೆ.
ಐಜಿಪಿ ತ್ಯಾಗರಾಜನ್ ಭೇಟಿ: ಸ್ಥಳಕ್ಕೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಭೇಟಿ ನೀಡಿದ್ದಾರೆ. ಅಲ್ಲದೇ ಆರ್ಎಎಫ್ ತಂಡ ಸಹ ಸ್ಥಳದಲ್ಲಿ ಮೊಕ್ಕಾಂ ಹೊಡಿದೆ. ಈ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿನ ಗಾಜನ್ನು ಒಡೆದು ಕಾರನ್ನು ಜಖಂ ಮಾಡಿದ್ದಕ್ಕೆ ಅದರ ಮಾಲೀಕರು ಆಕ್ರೋಶ ಹೊರ ಹಾಕಿದರು.
ಸ್ಥಳಕ್ಕೆ ಶಾಸಕ ಭೇಟಿ: ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪನವರು, ರಾಗಿಗುಡ್ಡದಲ್ಲಿ ಕಳೆದ ಕೆಲ ದಿನಗಳಿಂದ ರಾಜ್ಯವೊಂದರ ಕಾರುಗಳು ಓಡಾಡುತ್ತಿದ್ದವು. ಇದರ ಬಗ್ಗೆ ಪೊಲೀಸರು ಗಮನ ಹರಿಸಬೇಕು. ಇಂದು ನಡೆದ ಘಟನೆಯು ಪೂರ್ವ ನಿಯೋಜಿತ ಎಂದು ಕಾಣುತ್ತದೆ. ಈ ಭಾಗದ ಯಾರು ಧೈರ್ಯಗೆಡುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ನಾವಿದ್ದೆವೆ ಎಂದು ಧೈರ್ಯ ತುಂಬಿದರು. ಈ ವೇಳೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ, ಪಾಲಿಕೆ ಸದಸ್ಯರಾದ ಪ್ರಭಾಕರ್ ಸೇರಿ ಇತರರಿದ್ದರು.
ಘಟನೆ ಬಗ್ಗೆ ಎಸ್ಪಿ ಹೇಳಿದ್ದಿಷ್ಟು : ಈ ಘಟನೆ ಕುರಿತು ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ಅವರು, ಮೆರವಣಿಗೆಯ ವೇಳೆ ದರ್ಷ್ಕಮಿಗಳು ಕಲ್ಲುತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಂತರ ಸಣ್ಣ ಪ್ರಮಾಣದ ಘರ್ಷಣೆ ಉಂಟಾಗಿದೆ. ಮಾಹಿತಿ ಬಂದಾಕ್ಷಣ ನಮ್ಮ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಾನು ಎರಡು ಗುಂಪುಗಳ ಜೊತೆ ಮಾತನಾಡಿದ್ದೇನೆ. ಆದರೆ, ಮೆರವಣಿಗೆ ವೇಳೆ ಕೆಲ ಯುವಕರ ಗುಂಪು ದಾಂಧಲೆ ನಡೆಸಿದೆ. ನಂತರ ಹೆಚ್ಚಿನ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು . ಘಟನೆಯಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದ್ದರ ಕುರಿತು ದೂರ ನೀಡಲು ತಿಳಸಲಾಗಿದೆ. ಘಟನೆಯಲ್ಲಿ ನಮ್ಮ ಕೆಲ ಸಿಬ್ಬಂದಿಗೂ ಗಾಯಗಳಾಗಿವೆ. ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ವಿಡಿಯೋ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಓದಿ: ಶಿವಮೊಗ್ಗದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ; ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ