ಶಿವಮೊಗ್ಗ: ನಿತ್ಯ ತಾಯಿಯನ್ನು ನಿಂದಿಸುತ್ತ, ಕುಡಿದು ಜಗಳ ಮಾಡುತ್ತಿದ್ದ ತಂದೆಯನ್ನ ಮಗನೇ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊರವಲಯದ ಬೊಮ್ಮನಕಟ್ಟೆಯ ಸಿದ್ದಪ್ಪ ಬಡಾವಣೆಯ ನಿವಾಸಿ ಮಂಜುನಾಥ್ (60) ಮಗನಿಂದಲೇ ಹತ್ಯೆಯಾದ ತಂದೆಯಾಗಿದ್ದಾನೆ. ರಾಕೇಶ್(25) ಕೊಲೆ ಮಾಡಿದ ಮಗ. ಮಂಜುನಾಥ್ ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ, ನಿನ್ನೆ ರಾಕೇಶ್ ತಾಯಿ ಮಗಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಈ ವೇಳೆ, ಮನೆಗೆ ಬಂದ ಮಂಜುನಾಥ್ ಹೆಂಡತಿ ಕಾಣದೇ ಇದ್ದಾಗ, ಆಕೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎನ್ನಲಾಗಿದೆ.
ನಿಮ್ಮ ಅಮ್ಮ ಬೇರೆಯವರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅವಾಚ್ಯವಾಗಿ ಬೈಯ್ದಿದ್ದಾನೆ. ಹಾಗೆಲ್ಲ ಅಮ್ಮನ ಬಗ್ಗೆ ಮಾತನಾಡಬೇಡ ಎಂದು ಹೇಳಿದ್ದಾರೆ. ಆದರೂ ಕೇಳದೆ ಬೈಯ್ದಿದಕ್ಕೆ ಕೋಪಗೊಂಡ ಮಗ ರಾಕೇಶ್ ಮನೆಯಲ್ಲಿಯೇ ಇದ್ದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಂಜುನಾಥ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ನಂತರ ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ. ತಾಯಿ ಆಸ್ಪತ್ರೆಯಿಂದ ಮನೆಗೆ ಬಂದು ನೋಡಿದಾಗ ಮಂಜುನಾಥ್ ಸಾವನ್ನಪ್ಪಿದ್ದ. ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ರಾಕೇಶ್ ಪೊಲೀಸರಿಗೆ ಶರಣಾಗಿದ್ದಾನೆ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.