ಶಿವಮೊಗ್ಗ: ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವಲ್ಲಿ ತಮ್ಮ ಪಕ್ಷ ವಿಫಲವಾಗಿದೆ ಎಂದು ಜೆಡಿಎಸ್ ನಾಯಕ ವೈ.ಎಸ್.ವಿ. ದತ್ತ ವಿಷಾದ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಧೋರಣೆಗಳನ್ನು ಖಂಡಿಸುವಲ್ಲಿ ನಮ್ಮ ಪಕ್ಷವು ಸೇರಿದಂತೆ ಇತರೆ ರಾಜಕೀಯ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಆದರೆ ಒಂದು ರಾಜಕೀಯ ಪಕ್ಷ ಮಾತ್ರ ಸಾಮಾಜಿಕ ಜಾಲತಾಣವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.
ಇಂದು ಕೇವಲ ರಾಜಕೀಯ ಪಕ್ಷಗಳಷ್ಟೇ ಅಲ್ಲ. ಬದಲಾಗಿ ಪ್ರಗತಿಪರ ಸಂಘಟನೆಗಳು ವಿಫಲವಾಗಿವೆ. ಸಾಹಿತಿಗಳು, ಕಲಾವಿದರು ಹಿಂದೆಲ್ಲ ಹೋರಾಟದಲ್ಲಿ ಭಾಗಿಯಾಗುತ್ತಿದ್ದರು. ರೈತ ಚಳವಳಿ ಅಂದ್ರೆ, ಕೇವಲ ರೈತರಷ್ಟೇ ಅಲ್ಲದೆ, ಸಾಹಿತಿಗಳು, ಕಲಾವಿದರು ಭಾಗಿಯಾಗುತ್ತಿದ್ದರು. ಇದರಿಂದ ಅದು ಜನಪರ ಚಳವಳಿಯಾಗಿ ರೂಪುಗೊಳ್ಳುತ್ತಿತ್ತು. ಗೋಕಾಕ್ ಚಳವಳಿಯಾದಾಗ, ತುರ್ತು ಸಂದರ್ಭದಲ್ಲಿ ಪಿ. ಲಂಕೇಶ್ ಸೇರಿದಂತೆ ಎಲ್ಲರೂ ಭಾಗಿಯಾಗಿರುತ್ತಿದ್ದರು ಎಂದರು.
ಇಂದು ರಾಜಕೀಯ ಪಕ್ಷಗಳು ಸತ್ವಹೀನರಾಗಲು ಸಾಮಾಜಿಕ ಜಾಲತಾಣಗಳು ಕಾರಣ. ನಾನು ಒಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ನಮಗೆ ಬಂದ ತಿಳುವಳಿಕೆ, ಸೂಕ್ಷ್ಮತೆ ಈಗ ಸೋಷಿಯಲ್ ಮೀಡಿಯಾದಿಂದ ಅರ್ಥಹೀನತೆ ಎನ್ನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. ನಾನು ಹೇಳುವ ಸತ್ಯ, ಕೇವಲ 10 ಜನರಿಗೆ ತಲುಪುತ್ತದೆ. ಅದೇ ಸಾಮಾಜಿಕ ಜಾಲತಾಣದಲ್ಲಿ ಹರಡುವ ಸುಳ್ಳು ಸಾವಿರಾರು ಜನರಿಗೆ ತಲುಪುತ್ತದೆ ಎಂದರು. ಸೋಶಿಯಲ್ ಮೀಡಿಯಾವನ್ನು ಒಂದು ರಾಜಕೀಯ ಪಕ್ಷ ಸಮರ್ಥವಾಗಿ ಬಳಸಿಕೊಂಡಿದೆ. ಇದರ ವಿರುದ್ಧದ ನಮ್ಮ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ಇದೆ ಎಂದು ದತ್ತ ಹೇಳಿದರು.