ಶಿವಮೊಗ್ಗ: ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ಶಿವಮೊಗ್ಗದಲ್ಲಿ ನಗರದ ಸರ್ಕಾರಿ ಶಾಲೆಗಳು ಸಹ ಸ್ಮಾರ್ಟ್ ಶಾಲೆಯಾಗಿ ರೂಪುಗೊಳ್ಳುತ್ತಿದೆ.
ನಗರದ ಸರ್ಕಾರಿ ಶಾಲೆಗಳು ಒಂದು ಕಡೆ ವಿದ್ಯಾರ್ಥಿಗಳ ಕೊರತೆ ಹಾಗೂ ಇಲಾಖೆಗಳ ನಿರ್ಲಕ್ಷ್ಯದಿಂದ ಶಾಲೆಗಳು ಬಿದ್ದು ಹೋಗುತ್ತಿವೆ. ಇಂತಹ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಸ್ಮಾರ್ಟ್ ಸಿಟಿ ಲಿಮಿಟೆಡ್ ಒಂದು ದಿಟ್ಟ ಹೆಜ್ಜೆಯನ್ನಿಟ್ಟು ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿ ಸ್ಮಾರ್ಟ್ ಶಾಲೆಯನ್ನಾಗಿ ಮಾಡಿದ್ದಾರೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಸುಮಾರು 45 ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಮಾಡಲಾಗಿದೆ. ಇದರಲ್ಲಿ 4 ಹೈಸ್ಕೂಲ್ ಹಾಗೂ ಉಳಿದ 41 ಪ್ರಾಥಮಿಕ ಹಿರಿಯ ಶಾಲೆಗಳಿವೆ. ಈ ಎಲ್ಲ ಶಾಲೆಗಳಿಗೆ ಒಂದು ಕಂಪ್ಯೂಟರ್ ಲ್ಯಾಬ್ ಹಾಗೂ ಒಂದು ಸ್ಮಾರ್ಟ್ ಕ್ಲಾಸ್ ತೆರೆಯಲಾಗಿದೆ.
ಡಿಜಿಟಲ್ ಲೈಬ್ರರಿಯಾದ ಕಂಪ್ಯೂಟರ್ ಲ್ಯಾಬ್: ಲ್ಯಾಬ್ನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಂಪ್ಯೂಟರ್ಗಳನ್ನು ಇಡಲಾಗಿದೆ. ಇಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಐಡಿ ಹಾಗೂ ಪಾಸ್ವರ್ಡ್ ನೀಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮಗೆ ನೀಡಿದ ಐಡಿ ಹಾಗೂ ಪಾಸ್ವರ್ಡ್ ಬಳಸಿ, ಶಿವಮೊಗ್ಗದ ಕೇಂದ್ರ ಗ್ರಂಥಾಲಯದಿಂದ ತಮಗೆ ಬೇಕಾದ ಪುಸ್ತಕಗಳನ್ನು ಆನ್ಲೈನ್ ಮೂಲಕ ಓದಬಹುದಾಗಿದೆ. ಡಿಜಿಟಲ್ ಲೈಬ್ರರಿಯ ಸದುಪಯೋಗವನ್ನು ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆ ಪಡೆಯಲು ಸಹಾಯಕವಾಗಿದೆ. ಅಲ್ಲದೇ ತಮ್ಮ ಪಠ್ಯಕ್ಕೆ ಸಂಬಂಧಿತ ವಿಷಯಗಳನ್ನು ಪಡೆಯಲು ಅನುಕೂಲವಾಗಿದೆ.
ಇದನ್ನೂ ಓದಿ: ಆರ್ಚಕನಹಳ್ಳಿಯಲ್ಲಿ ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಕಾಮಗಾರಿ ಶೀಘ್ರ ಆರಂಭ
ಬಹುಪಯೋಗಿ ಸ್ಮಾರ್ಟ್ಕ್ಲಾಸ್: ಇಲ್ಲಿ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲಾಗುತ್ತದೆ. ಇಲ್ಲೂ ಸಹ ಐಡಿ, ಪಾಸ್ವರ್ಡ್ ನೀಡಲಾಗಿರುತ್ತದೆ. ಇಲ್ಲಿ ಕಪ್ಪು ಹಲಗೆಯ ಬದಲಾಗಿ, ಗೋಡೆಯನ್ನೇ ಸ್ಕ್ರೀನ್ ಆಗಿ ಬಳಸಿಕೊಂಡು ಪಾಠ ಮಾಡಲಾಗುತ್ತದೆ. ಪ್ರೊಜೆಕ್ಟರ್ ಮೂಲಕ ಗೋಡೆಯ ಮೇಲೆ ಪಾಠ ಮಾಡಲಾಗುತ್ತದೆ. ಶಿಕ್ಷಕರು ಎಲೆಕ್ಟ್ರಾನಿಕ್ ಪೆನ್ ಮೂಲಕ ಚಿತ್ರಗಳನ್ನು ದೊಡ್ಡದಾಗಿ ಚಿಕ್ಕದಾಗಿ ಮಾಡಬಹುದು. ಪ್ರೊಜೆಕ್ಟರ್ನಲ್ಲಿ ಏನೂ ಡಿಸ್ಪ್ಲೇ ಆಗುತ್ತದೆಯೂ ಅದು ವಿದ್ಯಾರ್ಥಿಗಳ ಲ್ಯಾಪ್ಟಾಪ್ನಲ್ಲಿಯೂ ಬರುತ್ತದೆ. ಕನ್ನಡ, ಇಂಗ್ಲೀಷ್, ಹಿಂದಿ, ವಿಜ್ಞಾನ, ಸಮಾಜ ಸೇರಿದಂತೆ ಇತರ ವಿಷಯಗಳನ್ನು ಪಾಠ ಮಾಡುವುದರಿಂದ ಅವರಿಗೆ ತಮ್ಮ ಮುಂದೆ ಇರುವ ಚಿತ್ರಗಳನ್ನು ನೋಡಲು ಹಾಗೂ ಗುರುತಿಸಲು ಸಹಾಯಕವಾಗುತ್ತದೆ.