ಶಿವಮೊಗ್ಗ: ಇದೇ ಮೊದಲ ಬಾರಿಗೆ ಬೆಳೆ ಸಮೀಕ್ಷೆಯಲ್ಲಿ ರೈತರು ನೇರವಾಗಿ ಭಾಗಿಯಾಗಲು ಅವಕಾಶ ನೀಡಲಾಗಿದ್ದು, ರೈತರು ನಿಗದಿತ ಆ್ಯಪ್ನಲ್ಲಿ ಬೆಳೆ ಮಾಹಿತಿಯನ್ನು ಅಪ್‍ಲೋಡ್ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಮೀಕ್ಷೆ ಕುರಿತಾದ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಾರಿ ಬೆಳೆ ಸಮೀಕ್ಷೆ ಆಗಸ್ಟ್ 24ರವರೆಗೆ ನಡೆಯಲಿದ್ದು, ಬೆಳೆ ಸಮೀಕ್ಷೆಯನ್ನು ಉತ್ಸವವಾಗಿ ಆಚರಿಸಲಾಗುತ್ತಿದೆ. ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಸ್ವತಃ ತಾವೇ ಫಾರ್ಮರ್ಸ್ ಕ್ರಾಪ್ ಸರ್ವೇ ಆ್ಯಪ್ 2020-21ರಲ್ಲಿ ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ರೈತರು ತಾವು ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಈ ಮೊಬೈಲ್ ಆ್ಯಪ್ ಬಳಸಿಕೊಂಡು ನಿಗದಿತ ಸಮಯದ ಒಳಗಾಗಿ ಅಪ್‍ಲೋಡ್ ಮಾಡಬೇಕು ಎಂದು ಹೇಳಿದರು.
ರೈತರು ನಮೂದಿಸಿದ ಬೆಳೆ ಮಾಹಿತಿಯನ್ನು ಪರಿಶೀಲಿಸಿ, ಫೋಟೋ ಮತ್ತು ನಮೂದಿಸಿದ ಹೆಸರನ್ನು ತಾಳೆ ಮಾಡಿ ಅನುಮೋದಿಸಬೇಕು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸಂಗ್ರಹಿಸಲಾದ ಮಾಹಿತಿಯನ್ನು ಅನುಮೋದಿಸಲು ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ತಿಳಿಸಿದರು.
ಹೋಬಳಿ ಮಟ್ಟದಲ್ಲಿ ಖಾಸಗಿ ವ್ಯಕ್ತಿಗಳಿಗೆ ಮುಖ್ಯ ಬೆಳೆ, ಅಂತರ ಬೆಳೆ ಮತ್ತು ಮಿಶ್ರ ಬೆಳೆಗಳನ್ನು ನಮೂದಿಸುವ ಬಗ್ಗೆ ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನು ಅಪ್‍ಲೋಡ್ ಮಾಡುವ ಬಗ್ಗೆ ಮಾಹಿತಿ ಒದಗಿಸಬೇಕು. ಜೊತೆಗೆ ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ರೈತರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಬೇಕು ಎಂದರು.