ಶಿವಮೊಗ್ಗ : ನಗರದ ರೈಲು ನಿಲ್ದಾಣದ ಬಳಿ ಭಾನುವಾರ ಪತ್ತೆಯಾದ ಬಾಕ್ಸ್ನಲ್ಲಿ ಯಾವುದೇ ಸ್ಫೋಟಕ ವಸ್ತುಗಳಿರಲಿಲ್ಲ. ಬಾಕ್ಸ್ನಲ್ಲಿ ಪತ್ತೆಯಾಗಿರುವುದು ಉಪ್ಪು ಎಂದು ಮೇಲ್ನೋಟಕ್ಕೆ ಅನಿಸಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಜಾಗದ ಬಳಿ ಪತ್ತೆಯಾದ ಬಾಕ್ಸ್ನಲ್ಲಿ ಅನುಮಾನಾಸ್ಪದ ವಸ್ತುಗಳಿವೆ ಎಂದು ತಿಳಿದು ಬಂದ ಕಾರಣ ಪರಿಶೀಲನೆ ಮಾಡಿದ್ದೆವು. ನಂತರ ಅದು ಇನ್ನಷ್ಟು ಹೆಚ್ಚಿನ ಪರಿಶೀಲನೆ ಅವಶ್ಯಕತೆ ಇದೆ ಎಂದು ತಿಳಿದು ಬೆಂಗಳೂರಿನಿಂದ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳವನ್ನು ಕರೆಯಿಸಲಾಗಿತ್ತು.
ತಂಡ ಆಗಮಿಸಿ, ನಾಲ್ಕು ರೀತಿಯ ತಪಾಸಣೆ ನಡೆಸಿದ್ದಾರೆ. ನಂತರ ಅಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಇಲ್ಲ ಎಂದು ಖಾತರಿ ಪರಿಸಿಕೊಂಡ ಬಳಿಕ ಅದನ್ನು ನಮ್ಮ ವಶಕ್ಕೆ ಪಡೆದುಕೊಳ್ಳಲಾಯಿತು. ಅದರಲ್ಲಿ ಉಪ್ಪು ಹಾಗೂ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾಗಿವೆ. ಇದರಿಂದಲೇ ಬಾಕ್ಸ್ ತುಂಬ ಭಾರವಾಗಿತ್ತು. ಅದರ ಜೊತೆಗೆ ಸಿ.ಸಿ ಕ್ಯಾಮರಾದಲ್ಲಿ ಕೆಲ ಸಾಕ್ಷ್ಯಗಳು ಸಿಕ್ಕಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ರೈಲು ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್ ಪತ್ತೆ: ಜನರಲ್ಲಿ ಆತಂಕ
ನ. 3 ರಂದು ಕಾರಿನಲ್ಲಿ ಬಂದ ಇಬ್ಬರು ಬಾಕ್ಸ್ ಇಟ್ಟು ಹೋಗಿದ್ದಾರೆ. ಅವರು ಯಾರು? ಯಾಕೆ ಅಲ್ಲಿ ಇಟ್ಟರು? ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದುಕೊಂಡ ಇಬ್ಬರು ಸಹ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅನ್ನೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ವಿಚಾರಣೆ ನಡೆಸಲಾಗುತ್ತಿದೆ. ಬಾಕ್ಸ್ ಮೇಲಿನ ಗೋಣಿ ಚೀಲವು ಎಲ್ಲಿ ಉತ್ಪಾದನೆ ಆಗಿದೆ ಎಂದು ಬರೆಯಲಾಗಿದೆ ಅಷ್ಟೆ. ಆದರೇ, ಅಲ್ಲಿ ಇದುವರೆಗೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ತಂಡದಿಂದ ನಿರಂತರ ಕಾರ್ಯಾಚರಣೆ : ಗೋಣಿ ಚೀಲದಲ್ಲಿ ಮುಚ್ಚಿಟ್ಟಿದ್ದ ಎರಡು ಬಾಕ್ಸ್ಗಳು ಪತ್ತೆಯಾಗುತ್ತಿದ್ದಂತೆ ಶಿವಮೊಗ್ಗ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಬಳಿಕ ಬೆಂಗಳೂರಿನಿಂದ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳದವರನ್ನು ಕರೆಸಲಾಗಿತ್ತು. ಈ ತಂಡ ರಾತ್ರಿ ಸುಮಾರು 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕಾರ್ಯಾಚರಣೆ ನಡೆಸಿತು. ಮೊದಲು ಸ್ಕ್ಯಾನ್ ಮಾಡುವ ಮೂಲಕ ಬಾಕ್ಸ್‌ಗಳನ್ನು ನೋಡಲು ಯತ್ನಿಸಿದರು. ಅದು ಸಾಧ್ಯವಾಗಲಿಲ್ಲ. ನಂತರ ತೆರೆದು ನೋಡಿದಾಗ ಬಿಳಿ ಬಣ್ಣದ ಪುಡಿ ಕಂಡುಬಂದಿದ್ದು, ಗೊಬ್ಬರದ ಚೀಲದಲ್ಲಿದೆ. ಇದನ್ನು ಬಾಂಬ್ ನಿಷ್ಕ್ರಿಯ ತಂಡ ಬೆಂಗಳೂರಿನ ಎಫ್ಎಸ್ಎಲ್ ಲ್ಯಾಬ್ಗೆ ಕಳುಹಿಸಿದ್ದರು. ಅದು ಉಪ್ಪು ಅನ್ನೋದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ರೈಲು ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್ ಪತ್ತೆ: ಜನರಲ್ಲಿ ಆತಂಕ