ಶಿವಮೊಗ್ಗ: ರಾಜ್ಯ ವಿಧಾನಸಭಾ ಎಲೆಕ್ಷನ್ ಹಿನ್ನೆಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ತೆರೆದ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಟ್ಟು 83,29,495 ಲಕ್ಷ ರೂಪಾಯಿ ಮೌಲ್ಯದ ವಿವಿಧ ವಸ್ತುಗಳು ವಶಕ್ಕೆ ಪಡೆಯಲಾಗಿದೆ.
ಹೌದು, ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಜಿಲ್ಲೆಯ ಅಲ್ಲಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೆರೆದ ಚೆಕ್ಪೋಸ್ಟ್ನಲ್ಲಿ ತಪಾಸಣೆ ವೇಳೆ ಲಾರಿಯಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಡಕೆ ಪತ್ತೆಯಾಗಿದೆ. 206 ಚೀಲಗಳ 144 ಕ್ವಿಂಟಾಲ್ನ ಒಟ್ಟು 65,56,550 ರೂ. ಮೌಲ್ಯದ ಅಡಕೆ ವಶಕ್ಕೆ ಪಡೆಯಲಾಗಿದೆ. ಜೊತೆಗೆ, ಇದೇ ಚೆಕ್ಪೋಸ್ಟ್ನಲ್ಲಿಯೇ ದಾಖಲೆ ಇಲ್ಲದ 3,72,945 ರೂ. ಮೌಲ್ಯದ ವಿವಿಧ ಹಾರ್ಡ್ವೇರ್ ವಸ್ತುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇನ್ನೊಂದೆಡೆ, ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 14 ಲಕ್ಷ ರೂ. ಮೌಲ್ಯದ ಸೀರೆ ಹಾಗೂ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ಶಿವಮೊಗ್ಗ: ಲಕ್ಷಾಂತರ ಮೌಲ್ಯದ ದಿನಸಿ ಕಿಟ್, ನಗದು ಜಪ್ತಿ
ಇನ್ನು ಇದೇ ತಿಂಗಳ 2ನೇ ತಾರೀಖಿನಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ ಗೋದಾಮಿನಲ್ಲಿ ಮತದಾರರಿಗೆ ವಿತರಿಸಲು ಇಟ್ಟಿದ್ದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ದಿನಸಿ ಕಿಟ್ಗಳನ್ನು ವಶಕ್ಕೆ ಪಡೆದಿದ್ದರು. ಈ ಕಿಟ್ಗಳಲ್ಲಿ ಅಕ್ಕಿ, ಬೇಳೆ, ಶ್ಯಾವಿಗೆ, ಸಕ್ಕರೆ ಸೇರಿದಂತೆ ವಿವಿಧ ದಿನಸಿ ವಸ್ತುಗಳನ್ನು ಒಳಗೊಂಡ ಸುಮಾರು 500 ಬ್ಯಾಗ್ ಸಿಕ್ಕಿದ್ದವು. ಹಾಗೆಯೇ, ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕಗಗಪೊಸ್ಟ್ನಲ್ಲಿ ಲಾರಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸೂಕ್ತ ದಾಖಲೆಗಳಿಲ್ಲದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 115 ಕ್ವಿಂಟಲ್ ಅಕ್ಕಿ ದೊರೆತಿತ್ತು. ಲಾರಿಗಳನ್ನು ಪರಿಶೀಲಿಸಿದಾಗ ದಾಖಲೆ ಇಲ್ಲದ 4.50 ಲಕ್ಷ ರೂ. ಮೌಲ್ಯದ ರಗ್ಗು ಮತ್ತು ಜಮಖಾನ ವಶಕ್ಕೆ ಪಡೆಯಲಾಗಿತ್ತು. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ 90 ಸಾವಿರ ರೂ. ಪತ್ತೆಯಾಗಿದ್ದು, ಈ ಹಣಕ್ಕೆ ಸರಿಯಾದ ದಾಖಲೆ ಹಾಗೂ ಸೂಕ್ತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ : ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟ ಆಯೋಗ: 72.30 ಲಕ್ಷ ನಗದು, 23 ಸಾವಿರ ಲೀಟರ್ ಮದ್ಯ ವಶ
ಅಕ್ರಮ ನಡೆಯದಂತೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗವು ಶುಕ್ರವಾರ ಸುಮಾರು 72.30 ಲಕ್ಷ ರೂ. ನಗದು ವಶಪಡಿಸಿಕೊಂಡಿದೆ. ನಿಪ್ಪಾಣಿ ಕ್ಷೇತ್ರದಲ್ಲಿ 25 ಲಕ್ಷ ರೂ. ಮೌಲ್ಯದ 23,880 ಲೀಟರ್ ಮದ್ಯ, ಶಿವಾಜಿನಗರ ಕ್ಷೇತ್ರದಲ್ಲಿ 58.59 ಲಕ್ಷ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಚಿಕ್ಕಪೇಟೆ ಕ್ಷೇತ್ರದಲ್ಲಿ 25 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.