ಶಿವಮೊಗ್ಗ: ಜಿಲ್ಲೆಯ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೋಚಿದ್ದ 35 ಲಕ್ಷ ರೂ ಹಣವನ್ನೂ ಜಪ್ತಿ ಮಾಡಿದ್ದಾರೆ.
ಘಟನೆಯ ವಿವರ: ಜೂನ್ 17ರಂದು ರಾತ್ರಿ 11 ಗಂಟೆಯ ಸುಮಾರಿಗೆ ವಿಜಯನಗರ ಬಡಾವಣೆಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ 57 ವರ್ಷದ ಕಮಲಮ್ಮ ಎಂಬವರನ್ನು ಬಾಯಿ ಮುಚ್ಚಿ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಕಮಲಮ್ಮರನ್ನು ಅವರ ಮನೆಯ ಕಾರು ಚಾಲಕನೇ ಕೊಲೆ ಮಾಡಿ ಪರಾರಿಯಾಗಿದ್ದ ಎನ್ನುವ ಮಾಹಿತಿ ನಂತರ ಬಯಲಾಗಿತ್ತು. ಇದೀಗ ಆರೋಪಿ ಕಾರು ಚಾಲಕ ಹನುಮಂತ ನಾಯ್ಕ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಆರೋಪಿ ಹನುಮಂತ ನಾಯ್ಕ ಹಾಗು ಸಹಚರರಾದ ಪ್ರದೀಪ್, ಅಪ್ಪು ನಾಯ್ಕ, ಪ್ರಭು ನಾಯ್ಕ, ಸತೀಶ್, ರಾಜು ಹಾಗೂ ಕಾರು ನೀಡಿದ್ದ ಕೌಶಿಕ್ ಸೇರಿ ಸಂಚು ರೂಪಿಸಿದ್ದರು. ಕೊಲೆ ಮಾಡಿ ಮನೆಯಲ್ಲಿದ್ದ 35 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.
ಮಹಿಳೆಯ ಪತಿ ಮಲ್ಲಿಕಾರ್ಜುನ್ ಹೊಸದುರ್ಗದಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಆಗಿದ್ದು, ತಮ್ಮ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದರು. ಇವರು ಇದೇ ಕಾರು ಚಾಲಕನ ಸಹಾಯದಿಂದಲೇ ತಮ್ಮ ಮಗನ ಮೆಡಿಕಲ್ ವ್ಯಾಸಂಗ ಮತ್ತು ಪರೀಕ್ಷೆಗಾಗಿ 35 ಲಕ್ಷ ರೂ. ಜೋಡಿಸಿಟ್ಟಿದ್ದರಂತೆ. ಈ ಹಣದ ಮೇಲೆ ಕಣ್ಣು ಹಾಕಿದ್ದ ಹನುಮಂತ ನಾಯ್ಕ, ತನ್ನ ಸಹಚರರೊಂದಿಗೆ ಸೇರಿಕೊಂಡು ಜೂನ್ 16ರಂದು ಬಂದು ಕಮಲಮ್ಮ ಅವರ ಬಳಿ ಕಾರಣ ಹೇಳಿ 3 ಸಾವಿರ ರೂ ಹಣ ಕೇಳಿದ್ದನು.
ಆ ದಿನ ದೂರವಾಣಿಯಲ್ಲಿಯೇ ನಾನಿಲ್ಲದೇ ಇದ್ದಾಗ ಬಂದು ಹಣ ಕೇಳಬೇಡ ಎಂದು ಮಲ್ಲಿಕಾರ್ಜುನ್ ಗದರಿಸಿದ್ದು, ಹನುಮಂತ ನಾಯ್ಕ ವಾಪಸ್ ತೆರಳಿದ್ದ. ಜೂನ್ 17ರಂದು ಮಧ್ಯಾಹ್ನ ಸ್ಕೆಚ್ ಹಾಕಿಕೊಂಡು ಮನೆಗೆ ಬಂದ ಹನುಮಂತ ನಾಯ್ಕ್ ಹಣ ಕೇಳಿದ್ದಾನೆ. ಈ ವೇಳೆ, ಜೊತೆಗಿದ್ದ ಆರೋಪಿಯೊಬ್ಬ ಕಮಲಮ್ಮರಿಗೆ ನೀರು ತರಲು ಹೇಳಿದ್ದಾನೆ. ಅಡುಗೆ ಮನೆಗೆ ತೆರಳಿದ್ದ ಕಮಲಮ್ಮ ಅವರಿಗೆ ಹಿಂಬದಿಯಿಂದ ಹೋಗಿ ಬಾಯಿ ಮುಚ್ಚಿ ಕೊಲೆ ಮಾಡಿದ್ದರು. ಬಿಡಿಸಿಕೊಳ್ಳಲು ಯತ್ನಿಸಿದ್ದ ಅವರಿಗೆ ಕಾಯಿ ಸುಲಿಯುವ ರಾಡಿನಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು. ಬಳಿಕ ಬೀರುವಿನಲ್ಲಿದ್ದ 35 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದರು.
ಹನುಮಂತ ನಾಯ್ಕ ಕಳೆದೊಂದು ವರ್ಷದಿಂದ ಮಲ್ಲಿಕಾರ್ಜುನ್ ಅವರ ಬಳಿ ಖಾಸಗಿ ಕಾರಿಗೆ ಚಾಲಕನಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ನಂಬಿಕೆ ಗಳಿಸಿದ್ದ. ಹೀಗಾಗಿಯೇ ಹಣದ ವ್ಯವಹಾರವನ್ನು ಚಾಲಕನಿಂದಲೇ ಮಾಡಿಸುತ್ತಿದ್ದ ಮಲ್ಲಿಕಾರ್ಜುನ ಕುಟುಂಬ ಹನುಮಂತ ನಾಯ್ಕನನ್ನು ತೀರ ನಂಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೊಮ್ಯಾಟೋ ಡೆಲಿವರಿ ಬಾಯ್ಸ್ ಡ್ರೆಸ್ ಬಳಸಿ ಸ್ಕೆಚ್: 35 ಲಕ್ಷ ರೂ ಹಣವನ್ನು ಲಪಟಾಯಿಸಲೆಂದೇ ಸ್ಕೆಚ್ ಹಾಕಿದ್ದ ಹನುಮಂತ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಜೊಮ್ಯಾಟೋ ಡಿಲಿವರಿ ಬಾಯ್ಸ್ ಟೀಶರ್ಟ್ ಬೇರೆ ಖರೀದಿಸಿದ್ದನು. ಅದೇ ಟೀ ಶರ್ಟ್ ಧರಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಮನೆಗೆ ನುಗ್ಗಿದ್ದ ಈ ಕಿರಾತಕರು ಒಂಟಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. 35 ಲಕ್ಷ ರೂ. ಹಣವನ್ನು ತಲಾ 5 ಲಕ್ಷ ರೂ ನಂತೆ ಹಂಚಿಕೊಂಡು ಬೇರೆ ಬೇರೆಯಾಗಿ ಪರಾರಿಯಾಗಿದ್ದರು.
ಆದರೆ, ಪೊಲೀಸರು 6 ಜನ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬಾತನನ್ನೂ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 33,74,800 ರೂ. ನಗದು ಹಣ, ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಕಾ ಕಾರು, 7 ಹೊಸ ಮೊಬೈಲ್ ಫೋನ್ಗಳು, 3 ಬೈಕ್ ಮತ್ತು ಕೊಲೆ ಮಾಡಲು ಬಳಸಿದ ಆಯುಧ ಸೇರಿದಂತೆ ಒಟ್ಟು 41,14,800 ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: Bengaluru crime: ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್