ಶಿವಮೊಗ್ಗ: ಶಿವಮೊಗ್ಗದ ಗ್ರಾಮ ದೇವತೆ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಮಾರ್ಚ್ 22 ರಿಂದ 26ರ ವರೆಗೆ ನಡೆಯಲಿದೆ ಎಂದು ಸೇವಾ ಸಮಿತಿ ಈಗಾಗಲೇ ತಿಳಿಸಿದ್ದು, ನಿನ್ನೆ ಸಾರ ಹಾಕುವ ಮೂಲಕ ಅಧಿಕೃತವಾಗಿ ಸಾರ್ವಜನಿಕರಿಗೆ ಆಮಂತ್ರಣ ನೀಡಲಾಯಿತು.
ಜಾತ್ರೆಗೆ ಸಾರ ಹಾಕುವುದು ಅಂದ್ರೆ, ಜಾತ್ರೆ ಎಂದು ಪ್ರಾರಂಭವಾಗಿ ಎಂದು ಮುಗಿಯುತ್ತದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವುದು. ಈ ಹಿನ್ನೆಲೆಯಲ್ಲಿ ನಿನ್ನೆ ಆಟೋಗಳಿಗೆ ಮೈಕ್ ಕಟ್ಟಿ ಹಾಗೂ ಗ್ರಾಮಗಳಲ್ಲಿ ಹಲಗೆ ಬಡಿಯುತ್ತಾ ಹಬ್ಬದ ಬಗ್ಗೆ ಮಾಹಿತಿ ನೀಡಲಾಯಿತು.
ಜಾತ್ರೆಗೆ ಸಿದ್ಧತಾ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. ಸಾರ ಹಾಕಿದ ಬಳಿಕ ಊರಿನವರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಅಲ್ಲದೇ, ಊರಿನ ನಿವಾಸಿಗಳು ಹೊರ ಊರಿಗೆ ಹೋಗುವಂತಿಲ್ಲ, ಹೋದರೂ ರಾತ್ರಿಯೊಳಗೆ ಹಿಂತಿರುಗಬೇಕು, ಯಾವುದೇ ಮಂಗಳ ಕಾರ್ಯ ಮಾಡುವಂತಿಲ್ಲ ಎಂಬ ಸಂಪ್ರದಾಯವಿದೆ.
ಐದು ದಿನವರೆಗೆ ಜಾತ್ರೆ ನಡೆಯಲಿದ್ದು, ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಬುಧವಾರದಿಂದ ಶನಿವಾರದ ವರೆಗೆ ದೇವಿಯ ದರ್ಶನ ಪಡೆಯಬಹುದಾಗಿದೆ. ಮಾರ್ಚ್ 26 ರಂದು ರಾತ್ರಿ ಗದ್ದುಗೆಯಲ್ಲಿ ವಿಶೇಷ ಪೂಜೆ ನಡೆಸಿ ನಂತರ ಮೂರ್ತಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಗಾಂಧಿ ಬಜಾರ್, ಬಿ.ಎಚ್. ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.
ಹಿನ್ನೆಲೆ ಏನು?: ಶಿವಮೊಗ್ಗದ ಶಿವಪ್ಪ ನಾಯಕ ಕೋಟೆಯ ಬಳಿ ಈ ದೇವಾಲಯ ಇರುವುದರಿಂದ ಕೋಟೆ ಮಾರಿ ಎಂಬ ಹೆಸರು ಬಂತು ಎನ್ನಲಾಗಿದೆ. ಈ ಹಿಂದೆ ಶಿವಪ್ಪ ನಾಯಕ ಸೇರಿದಂತೆ ಆತನ ವಂಶಸ್ಥರು ಯಾವುದೇ ಯುದ್ಧಗಳಿಗೆ ಹೋಗಬೇಕಾದ್ರು ಮೊದಲು ಮಾರಿಗೆ ಬಲಿ ನೀಡುತ್ತಿದ್ದರು. ಮೊದಲು ಬಯಲಿನಲ್ಲಿದ್ದ ದೇವಿಯನ್ನು ನಂತರ ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ಎರಡು ವರ್ಷಕ್ಕೊಮ್ಮೆಜಾತ್ರೆಯು ಅತ್ಯಂತ ವೈಭದಿಂದ ನಡೆಯುತ್ತದೆ. ಮೊದಲು ಮೂರು ದಿನ ನಡೆಯುತ್ತಿದ್ದ ಜಾತ್ರೆಯನ್ನು ಇದೀಗ ಐದು ದಿನಗಳ ವರೆಗೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಸೋಶಿಯಲ್ ಮೀಡಿಯಾ ಸ್ಟಾರ್ ಗಾಯತ್ರಿ ದುರ್ಮರಣ