ಶಿವಮೊಗ್ಗ: ನಗರದ ಹೊರ ವಲಯದ ಹರಿಗೆ ಬಡಾವಣೆಯಲ್ಲಿ ರೈತ ದಸರಾ ಅಂಗವಾಗಿ ಕೆಸರು ಓಟ ನಡೆಸಲಾಯಿತು. ಹರಿಗೆಯ ಸಕ್ಕರೆ ಕಾರ್ಖಾನೆಯ ಗದ್ದೆಯಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆ ನಡೆಸಲಾಯಿತು. ಕೆಸರು ಗದ್ದೆ ಓಟವನ್ನು ರೈತ ಮುಖಂಡ ಕೆ.ಟಿ.ಗಂಗಾಧರ್ ಹಸಿರು ಟೇಪ್ ಕಟ್ ಮಾಡಿ ಚಾಲನೆ ನೀಡಿದರು.
ರೈತ ದಸರಾದ ಅಂಗವಾಗಿ ಕೆಸರು ಗದ್ದೆ ಓಟ, ಮಹಿಳೆಯರಿಗೆ ಅಡಿಕೆ ಸುಲಿಯುವ ಸ್ಪರ್ಧೆ, ಕೆಸರಿನಲ್ಲಿ ಹಗ್ಗ ಜಗ್ಗಾಟ ಸೇರಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪ್ರಥಮವಾಗಿ ಮಹಿಳೆಯರಿಗೆ ಪ್ರತ್ಯೇಕವಾಗಿ ಕೆಸರಿನ ಓಟ ನಡೆಸಲಾಯಿತು. ಇಲ್ಲಿ ಮಹಿಳೆಯರು ಕೆಸರಿನಲ್ಲಿ ಬಿದ್ದು, ಎದ್ದು ಓಡಿದರು. ನಂತರ ಪುರುಷರ ಓಟದಲ್ಲಿ 16 ವರ್ಷದ ಒಳಗಿನವರಿಗಾಗಿ ಪ್ರತ್ಯೇಕ ಸ್ಪರ್ಧೆ ಹಾಗೂ 16 ವರ್ಷ ಮೇಲ್ಪಟ್ಟವರಿಗಾಗಿ ಪ್ರತ್ಯೇಕ ಸ್ಪರ್ಧೆಯನ್ನು ನಡೆಸಲಾಯಿತು. ಇದರಲ್ಲಿ ಮಕ್ಕಳು ಹಾಗೂ ವಯಸ್ಕರು ಸಹ ಎದ್ದು ಬಿದ್ದು ಓಡಿ ಗುರಿ ಮುಟ್ಟಿದರು.
ಕೆಸರು ಗದ್ದೆ ಓಟ ಮುಗಿಯುತ್ತಿದ್ದಂತೆಯೇ ಮಹಿಳೆಯರಿಗಾಗಿ ಅಡಿಕೆ ಕಾಯಿ ಸುಲಿಯುವ ಸ್ಪರ್ಧೆ ನಡೆಸಲಾಯಿತು. ಇದು ಮಲೆನಾಡಿನ ವಿಶೇಷತೆಯಿಂದ ಕೊಡಿರುವ ಕಲೆಯಾಗಿದೆ. ಇದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅಡಿಕೆ ಸುಲಿಯುವ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ಮಹಿಳೆಯರು ಅತ್ಯಂತ ಉತ್ಸಾಹದಿಂದ ಭಾಗಿಯಾಗಿದ್ದರು. ಈ ವೇಳೆ ಮೇಯರ್ ಲತಾ ಗಣೇಶ್, ಉಪಮೇಯರ್ ಚನ್ನ ಬಸಪ್ಪ, ಪಾಲಿಕೆಯ ಸದಸ್ಯರುಗಳಾದ ಯೋಗೀಶ್, ಧೀರರಾಜ್ ಹೂನ್ನಾವಿಲೆ, ಸತ್ಯನಾರಾಯಣ ಸೇರಿದಂತೆ ಇತರರು ಹಾಜರಿದ್ದರು. ಒಟ್ಟಾರೆ, ಕೆಸರು ಗದ್ದೆ ಓಟವನ್ನು ನೋಡಿ ಶಿವಮೊಗ್ಗ ಜನ ಪುಲ್ ಎಂಜಾಯ್ ಮಾಡಿದ್ದಾರೆ.