ಶಿವಮೊಗ್ಗ: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪಾವತಿಸಲು ಬಾಕಿ ಉಳಿದಿರುವ ಬೆಳೆ ವಿಮೆ ಮೊತ್ತವನ್ನು ಆದಷ್ಟು ಬೇಗನೆ ರೈತರ ಖಾತೆಗಳಿಗೆ ಪಾವತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ವಿಮಾ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
2018-19ನೇ ಸಾಲಿನಲ್ಲಿ ಜಿಲ್ಲೆಯ 10,171 ಮಂದಿ ರೈತರಿಗೆ 20 ಕೋಟಿ ರೂ. ಬೆಳೆ ವಿಮೆ ಮೊತ್ತ ನೀಡಲಾಗಿದೆ. ಇನ್ನೂ 3,386 ಪ್ರಕರಣಗಳು ಬಾಕಿ ಇದ್ದು, 6.44 ಕೋಟಿ ರೂ. ಹಣವನ್ನು ವಿಮಾ ಕಂಪನಿಗಳು ಪಾವತಿಸಬೇಕಾಗಿದೆ. ಇದೇ ರೀತಿ ಅಡಿಕೆ, ಶುಂಠಿ ಮತ್ತು ಕಾಳು ಮೆಣಸು ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಇದ್ದು, 2018-19ನೇ ಸಾಲಿನಲ್ಲಿ 8,889 ರೈತರು ಬೆಳೆ ವಿಮೆ ಪಾಲಿಸಿ ಪಡೆದಿದ್ದಾರೆ. ಇವರಿಗೆ ಒಟ್ಟು 24.99 ಕೋಟಿ ರೂ. ಬೆಳೆ ವಿಮೆ ನೀಡಬೇಕಾಗಿದ್ದು, ಇದುವರೆಗೆ ಕೇವಲ 9.63 ಕೋಟಿ ರೂ. ಪಾವತಿಸಲಾಗಿದೆ. 2017-18ನೇ ಸಾಲಿನಲ್ಲಿ ಒಟ್ಟು 450 ಪ್ರಕರಣಗಳಲ್ಲಿ 1.33 ಕೋಟಿ ರೂ. ಪಾವತಿಗೆ ಬಾಕಿ ಇದೆ. ಈ ಕುರಿತು ವಿಮಾ ಕಂಪನಿಗಳಿಗೆ ಸೂಚನಾ ಪತ್ರ ಬರೆಯುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಹಂಗಾಮಿನಲ್ಲಿ ಶೇ. 50ರಷ್ಟು ಪ್ರಾಯೋಗಿಕ ಬೆಳೆ ಕಟಾವು ಕಾರ್ಯ ಪೂರ್ಣಗೊಳಿಸಲಾಗಿದೆ. ಮೆಕ್ಕೆಜೋಳ ಪ್ರಾಯೋಗಿಕ ಬೆಳೆ ಕಟಾವು ಬಹುತೇಕ ಪೂರ್ಣಗೊಂಡಿದ್ದು, ಆದಷ್ಟು ಬೇಗನೇ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಪರಸ್ಪರ ಸಮನ್ವಯದಿಂದ ಈ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.