ಶಿವಮೊಗ್ಗ: ಮಾರಣಾಂತಿಕ ಕಾಯಿಲೆಗಳ ವಿರುದ್ಧ 2ವರ್ಷದೊಳಗಿನ ಮಕ್ಕಳಲ್ಲಿ ಹಾಗೂ ಗಭರ್ಣಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ, ಮಿಷನ್ ಇಂದ್ರಧನುಷ್ ಯೋಜನೆಯಡಿಯಲ್ಲಿ ಧನುವರ್ಯು, ಬಾಲಕ್ಷಯ, ಗಂಟಲುಮಾರಿ, ಮುಂತಾದ ಮಾರಕ ಕಾಯಿಲೆಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಲಸಿಕಾ ಅಭಿಯಾನ ನಿರೀಕ್ಷೆಯಂತೆ ಅನುಷ್ಠಾನಗೊಳ್ಳಲಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಹಿಂದಿನ ಲಸಿಕಾ ಅಭಿಯಾನದಲ್ಲಿ ಹಾಗೂ ಈವರೆಗೆ ಲಸಿಕೆಯನ್ನು ಹಾಕಿಸದೆ ಕೈಬಿಟ್ಟು ಹೋಗಿರುವ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ. ನಗರದ ಕೊಳಚೆ ಪ್ರದೇಶಗಳು, ವಲಸಿಗರು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆ ಪಡೆಯದಿರುವ ಮಕ್ಕಳು ಮತ್ತು ಗಭರ್ಣಿಯರಿಗೆ ಲಸಿಕೆ ಹಾಕಲು ಸಾಧ್ಯವಾಗಲಿದೆ ಎಂದರು.
ಮಕ್ಕಳು ಮತ್ತು ಗಭರ್ಣಿಯರಿಗೆ ಕಾಲಕಾಲಕ್ಕೆ ಕೆಲವು ಚುಚ್ಚುಮದ್ದುಗಳನ್ನು ನೀಡುವ ಅಗತ್ಯವಿದೆ. ಲಸಿಕೆಗಳನ್ನು ಪಡೆಯದಿರುವವರು ಮುಂದಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಂಭವವಿದೆ ಆದ್ದರಿಂದ ಆರಂಭದ ಹಂತವಾಗಿ ಡಿಸೆಂಬರ್ 02ರಂದು ಈ ಲಸಿಕೆ ಆಂದೋಲನವನ್ನು ಜಿಲ್ಲೆಯಾದ್ಯಂತ ಆಯೋಜಿಸಲಾಗಿದೆ. ಡಿಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ಮಾಹೆಗಳಲ್ಲಿ ತಲಾ ಹತ್ತು ದಿನಗಳಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ಲಸಿಕೆ ಕಾರ್ಯಕ್ರಮ :
5ಮತ್ತು 6ವರ್ಷದ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ 10ಮತ್ತು 16ವರ್ಷದ ಮಕ್ಕಳಿಗೆ ಟಿ.ಡಿ.ಲಸಿಕೆಯನ್ನು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಮಕ್ಕಳಿಗೆ ಡಿಸೆಂಬರ್ 11 ರಿಂದ 31ರವರೆಗೆ ಲಸಿಕೆ ಹಾಕಲಾಗುವುದು. ಪೋಷಕರು ನಿಗಧಿಪಡಿಸಿದ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಸೂಚಿಸಿದರು.