ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಬಿಜೆಪಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಅವರು ಟಿಕೆಟ್ ಘೋಷಣೆ ಮಾಡಿದ್ದಾರೆ. ಭದ್ರಾವತಿ ಹಾಗೂ ಶಿಕಾರಿಪುರ ಕ್ಷೇತ್ರಗಳಿಗೆ ಹೊಸಬರಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಹಳೆಬರಿಗೆ ಮಣೆ ಹಾಕಲಾಗಿದೆ.
ಭದ್ರಾವತಿ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯ ಹಿರಿಯ ಕಾರ್ಯಕರ್ತ, ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ನಿರ್ದೇಶಕರು, ವಕೀಲರೂ ಆಗಿರುವ ಮಂಗೋಟೆ ರುದ್ರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗೋಟೆ ರುದ್ರೇಶ್ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇವರು ಬಿಜೆಪಿ ನೆಲೆಯೇ ಇಲ್ಲದ ಭದ್ರಾವತಿಯಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಶಾಸಕ ಬಿ.ಕೆ. ಸಂಗಮೇಶ್, ಜೆಡಿಎಸ್ ನಿಂದ ಶಾರದಾ ಅಪ್ಪಾಜಿಗೌಡ ಅವರು ಸ್ಪರ್ಧೆ ಮಾಡುತ್ತಿದ್ದಾರೆ.
ಕಾರ್ಯಕರ್ತರ ವಿರೋಧ ನಡುವೆಯೂ ಅಶೋಕ ನಾಯ್ಕರಿಗೆ ಟಿಕೆಟ್: ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಶೋಕ ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಎರಡನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ನಾಯ್ಕ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷದ ಕಾರ್ಯಕರ್ತರ ವಿರೋಧ ಇದ್ದರು ಸಹ ಅಶೋಕ ನಾಯ್ಕ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಶಾರದ ಪೂರ್ಯನಾಯ್ಕ್ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ನಿಂದ ಯಾವುದೇ ಟಿಕೆಟ್ ಘೋಷಣೆ ಆಗಿಲ್ಲ. ತೀರ್ಥಹಳ್ಳಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಇವರು ಬಿಜೆಪಿಯಿಂದ 1983 ರಿಂದ ಸತತವಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಿಂದ ಕಿಮ್ಮನೆ ರತ್ನಾಕರ್ ಅಖಾಡದಲ್ಲಿದ್ದಾರೆ. ಜೆಡಿಎಸ್ ನಿಂದ ಅಭ್ಯರ್ಥಿ ಘೋಷಣೆ ಆಗಿಲ್ಲ.
ಸಾಗರದಿಂದ ಹರತಾಳು ಹಾಲಪ್ಪ ಅವರಿಗೆ ಮತ್ತೆ ಪಕ್ಷ ಮಣೆ ಹಾಕಿದೆ. ಇವರು ಸಾಗರದಲ್ಲಿ ಎರಡನೇ ಬಾರಿ ಸ್ಪರ್ಧೆ ಮಾಡುತ್ತಿದ್ದಾರೆ. ಹಿಂದೆ ಸೊರಬ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಇವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಗೋಪಾಲಕೃಷ್ಣ ಬೇಳೂರು ಕಣದಲ್ಲಿದ್ದಾರೆ. ಸೊರಬದಿಂದ ಪುನಃ ಕುಮಾರ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಇವರಿಗೆ ನಮೋ ವೇದಿಕೆ ವಿರೋಧ ಮಾಡುತ್ತಿದ್ದರು ಸಹ ಟಿಕೆಟ್ ನೀಡಲಾಗಿದೆ. ಇಲ್ಲಿ ಕಾಂಗ್ರೆಸ್ ನಿಂದ ಮಧು ಬಂಗಾರಪ್ಪ ಸ್ಪರ್ಧೆ ಇದೆ. ಇದರಿಂದ ಸೊರಬದಲ್ಲಿ ಮತ್ತೆ ಸಹೋದರರ ಸವಾಲ್ ನಡೆಯಲಿದೆ. ಇಲ್ಲಿ ಜೆಡಿಎಸ್ ಸ್ಪರ್ಧೆಗೆ ಹೊಸ ಮುಖ ಸಮುನವಳ್ಳಿಯ ಪ್ರಸನ್ನ ಸ್ಪರ್ಧೆ ಸಾಧ್ಯತೆ ಇದೆ.
ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ವಿಜಯೇಂದ್ರ ಇದೇ ಪ್ರಥಮ ಬಾರಿಗೆ ವಿಧಾನಸಭೆಯ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ. ಶಿವಮೊಗ್ಗ ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಅವರು ಚುನಾವಣಾ ಕಣದಿಂದ ಹಿಂದೆ ಸರಿದ ಕಾರಣ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಅನ್ನು ಪೆಂಡಿಂಗ್ನಲ್ಲಿ ಇಡಲಾಗಿದೆ. ಈ ಕ್ಷೇತ್ರಕ್ಕೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಶೆಟ್ಟರ್ಗೆ ಹೈಕಮಾಂಡ್ ಬುಲಾವ್.. ಈಶ್ವರಪ್ಪ, ಸವದಿಗೆ ಬಿಎಸ್ವೈ ಕರೆ