ಶಿವಮೊಗ್ಗ: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ಪೊಲೀಸರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದ್ದು, ಇಂದು ಶಿರಾಳಕೊಪ್ಪ ಬಂದ್‌ಗೆ ಕರೆ ನೀಡಿದೆ. "ಶಿರಾಳಕೊಪ್ಪ ಪೊಲೀಸರು ಕಾಂಗ್ರೆಸ್ ಮುಖಂಡ ಬಿಲಾಲ್ ಎಂಬವರ ಮಾತು ಕೇಳಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ" ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಬಂದ್ ನಡೆಸುತ್ತಿದೆ.
ಜನರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಸಿ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಪಟ್ಟಣ ಬಿಕೋ ಎನ್ನುತ್ತಿದೆ. ವಾಹನ ಸಂಚಾರ ಕೂಡ ವಿರಳವಾಗಿದೆ. ಸಾರಿಗೆ ವ್ಯವಸ್ಥೆ ಎಂದಿನಂತಿದೆ. ಹಿಂದೂಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.
"ಕಾಂಗ್ರೆಸ್ ಮುಖಂಡ ಬಿಲಾಲ್ ಎಂಬಾತನ ಮಾತಿನಿಂದ ಪೊಲೀಸರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ತನ್ನ ಪಾಡಿಗೆ ತಾನು ಕೆಲಸ ಮಾಡಬೇಕೇ ವಿನಃ ಕುಖ್ಯಾತ ರೌಡಿಯ ಮಾತು ಕೇಳಿ ಆತನ ಎಂಜಲು ಕಾಸಿಗೆ ಆಸೆಪಟ್ಟು ಈ ಕೃತ್ಯವನ್ನು ಎಸಗುತ್ತಿರುವುದು ಸರಿಯಲ್ಲ. ಅಂಥವರ ವಿರುದ್ಧ ಸಂಘಟನೆಯು ಸ್ವಯಂಘೋಷಿತ ಬಂದ್‌ಗೆ ಕರೆ ನೀಡಿದೆ. ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಅಲ್ಲಿಯತನಕ ಪ್ರತಿಭಟನೆ ನಡೆಸುತ್ತೇವೆ" ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಚಾಲಕ ಸತೀಶ್ ತಿಳಿಸಿದರು.
ಇದನ್ನೂ ಓದಿ: ಭಾರತ್ ಜೋಡೋ ಇಂದು ಶ್ರೀನಗರದಲ್ಲಿ ಸಮಾರೋಪ; ಪಕ್ಷದ ಮುಖ್ಯ ಕಚೇರಿಯಲ್ಲಿ ಧ್ವಜಾರೋಹಣ, ರ್‍ಯಾಲಿ
"ಶಿಕಾರಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಿಂದೂಗಳಿಗೆ ರಕ್ಷಣೆ ನೀಡಬೇಕಿದೆ. ಗ್ರಾಮಾಂತರದಿಂದ ಬರುತ್ತಿರುವ ಹಿಂದೂಗಳಿಗೆ ಸೂಕ್ತ ರಕ್ಷಣೆಯ ನೆರವನ್ನು ಪೊಲೀಸ್ ಇಲಾಖೆ ಒದಗಿಸಿಕೊಡಬೇಕು. ಕಾಂಗ್ರೆಸ್ ಮುಖಂಡ ಬಿಲಾಲನ ವಿರುದ್ಧ ಈಗಾಗಲೇ ಜಿಂಕೆ ಹತ್ಯೆ, ಗಾಂಜಾ ವ್ಯಾಪಾರ, ನವಿಲು ಹತ್ಯೆ ಕೇಸ್ಗಳಿವೆ. ಇವೆಲ್ಲವನ್ನೂ ಮತ್ತೊಮ್ಮೆ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಎಎಸ್ಪಿ ಅನಿಲ್ ಭೂಮರೆಡ್ಡಿಯವರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇಂದು ವಾಲ್ಮೀಕಿ ಭವನದಿಂದ ಶಿರಾಳಕೊಪ್ಪ ಪೊಲೀಸ್ ಠಾಣೆಯ ತನಕ ಮೆರವಣಿಗೆ ನಡೆಸಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ: ಯಾರೋ ಬಾರ್ನಲ್ಲಿ ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ?: ಗೃಹ ಸಚಿವ ಆರಗ ಜ್ಞಾನೇಂದ್ರ