ಶಿವಮೊಗ್ಗ : ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ರಾಜ್ಯದ ಎಲ್ಲ ಎಪಿಎಂಸಿಗಳು ನಷ್ಟದ ಸುಳಿಗೆ ಸಿಲುಕಿವೆ. ರಾಜ್ಯದ ಪ್ರಮುಖ ಎಪಿಎಂಸಿಗಳಲ್ಲಿ ಒಂದಾಗಿರುವ ಶಿವಮೊಗ್ಗ ಎಪಿಎಂಸಿ ಇದೀಗ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ. ಪರಿಣಾಮ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಂಡಿದ್ದಾರೆ.
ರಾಜ್ಯದ ಎಪಿಎಂಸಿಗಳು ಇದುವರೆಗೆ ಶೇಕಡಾ 1.35ರಷ್ಟು ಸೆಸ್ ಸಂಗ್ರಹ ಮಾಡುತ್ತಿದ್ದವು. ಆಗ ಎಪಿಎಂಸಿಗಳ ಅಭಿವೃದ್ಧಿಯನ್ನು ಇದೇ ಸೆಸ್ ಹಣದಲ್ಲಿ ಮಾಡಲಾಗುತ್ತಿತ್ತು. ಆದರೆ, ನೂತನ ಕಾಯ್ದೆಯಂತೆ ಎಪಿಎಂಸಿಗಳು ಶೇ. ಕೇವಲ 0.35 ನಷ್ಟು ಮಾತ್ರ ಸೆಸ್ ವಸೂಲಿ ಮಾಡಬೇಕಾಗಿದೆ.
ಹೀಗಾಗಿ, ಎಪಿಎಂಸಿಗಳಿಗೆ ಆದಾಯವೇ ಇಲ್ಲದಂತಾಗಿದೆ. ಜೊತೆಗೆ ನೂತನ ಕಾಯ್ದೆಯಂತೆ ವರ್ತಕರು ನೇರವಾಗಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ಎಪಿಎಂಸಿಗೆ ಬರುವ ಕೃಷಿ ಉತ್ಪನ್ನಗಳ ಪ್ರಮಾಣದಲ್ಲಿಯೂ ಗಣನೀಯ ಇಳಿಕೆಯಾಗಿದೆ. ಇದು ಎಪಿಎಂಸಿಗಳು ನಷ್ಟದ ಸುಳಿಗೆ ಸಿಲುಕಲು ಪ್ರಮುಖ ಕಾರಣ.
ಸರ್ಕಾರ ಭತ್ತಕ್ಕೆ 1800 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ, ಇದುವರೆಗೆ ಭತ್ತ ಖರೀದಿ ಕೇಂದ್ರಗಳನ್ನೇ ತೆರೆದಿಲ್ಲ. ಹೀಗಾಗಿ, ವರ್ತಕರು ರೈತರಿಂದ ಕೇವಲ 1300 ರೂಪಾಯಿಗೆ ಭತ್ತ ಖರೀದಿಸುತ್ತಿದ್ದಾರೆ. ಇದೇ ರೀತಿ ಅಡಕೆ ವಹಿವಾಟಿನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆಯನ್ನು ವರ್ತಕರು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.
ಇದುವರೆಗೆ ಎಪಿಎಂಸಿಗಳು ರೈತರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದವು. ಜೊತೆಗೆ ರೈತರ ಬೆಳೆಗಳಿಗೆ ಸೂಕ್ತ ದರವನ್ನೂ ನೀಡುತ್ತಿದ್ದವು. ಆದರೆ, ಇದೀಗ ಹೊಸ ಕಾಯ್ದೆಯಲ್ಲಿ ವರ್ತಕರಿಗೆ ಪರಮಾಧಿಕಾರ ನೀಡಿರುವುದರಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.