ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಶಾಂತಿಯ ತೋಟ. ಆದರೆ, ಅದೇ ಶಾಂತಿಯ ತವರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುಗಲಭೆ, ಕೊಲೆ, ದರೋಡೆಗಳು ಹೆಚ್ಚಾಗುತ್ತಿವೆ.
ಅದರಂತೆ ಶಾಂತವಾಗಿದ್ದ ಶಿವಮೊಗ್ಗ ನಗರ ಮೊನ್ನೆ ರಾತ್ರಿಯ ಬಜರಂಗದಳದ ಕಾರ್ಯಕರ್ತನ ಹತ್ಯೆಯಿಂದಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಭಾನುವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೂಂದು ಬಜರಂಗದಳದ ಕಾರ್ಯಕರ್ತನ ಮೇಲೆ ನಗರದ ಸಿಗೇಹಟ್ಟಿಯ ಬಳಿ ಲಾಂಗುಗಳಿಂದ ಬರ್ಬರ್ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹರ್ಷ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವುದನ್ನ ನೋಡಿದ ಸ್ಥಳೀಯರು ಕೂಡಲೇ ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಹರ್ಷ ಸಾವನ್ನಪ್ಪಿದ್ದಾರೆ. ಈ ಸುದ್ದಿ ತಿಳಿಯುತ್ತಿದಂತೆ ಬಜರಂಗದಳದ ನೂರಾರು ಕಾರ್ಯಕರ್ತರು,ಆಸ್ಪತ್ರೆಯ ಬಳಿ ಜಮಾಯಿಸಿದ್ದಾರೆ.
ಅಲ್ಲಿಯವರೆಗೂ ಶಾಂತವಾಗಿದ್ದ ಮಲೆನಾಡು ಒಂದೇ ಸಮನೆ ಹೊತ್ತಿ ಉರಿದಿದೆ. ಹರ್ಷ ಸಾವನ್ನಪ್ಪಿರುವ ಸುದ್ದಿ ತಿಳಿದ ಯುವಕರು ಬೈಕ್, ಟಾಟಾ ಏಸ್ಗೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗಳು ನಡೆಯುತ್ತಿದಂತೆ ಹೈಅಲರ್ಟ್ ಆದ ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆದರೂ ಸಹ ಯುವಕರ ಆಕ್ರೋಶ ತಣ್ಣಗಾಗಿಲ್ಲ. ಬೆಳಗ್ಗೆ ಸಹ ಕಲ್ಲು ತೂರಾಟ ಹಾಗೂ ಮತ್ತೆ ಬೆಂಕಿ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ಮೆಗ್ಗಾನ್ ಆಸ್ಪತ್ರೆಯಿಂದ ಹರ್ಷನ ಮನೆಗೆ ಮೃತ ದೇಹದ ಮೆರವಣಿಗೆಯನ್ನು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆಯಲ್ಲಿ ರಸ್ತೆ ಪಕ್ಕ ನಿಲ್ಲಿಸಿದ ಬೈಕ್, ಹಣ್ಣಿನ ಅಂಗಡಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಾನಿ ಮಾಡಿದ್ದಾರೆ.
ನಂತರ ಮಧ್ಯಾಹ್ನದ ವೇಳೆಗೆ ಸಿಗೇಹಟ್ಟಿಯ ಹರ್ಷನ ಮನೆಯಿಂದ ಹರ್ಷನ ಅಂತಿಮ ಯಾತ್ರೆ ಆರಂಭ ಗೊಂಡಿದೆ. ಈ ವೇಳೆಯಲ್ಲಿ ನಗರದ ಗಾಂಧಿ ಬಜಾರ್‌ನಲ್ಲಿ ಎರಡು ಕೋಮಿನ ನಡುವೆ ಕಲ್ಲು ತೂರಾಟ ನಡೆದಿದೆ. ಈ ವೇಳೆಯಲ್ಲಿ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಯುವಕರು, ಬಿಹೆಚ್ ರಸ್ತೆಯ ಅಕ್ಕಪಕ್ಕದ ಅಂಗಡಿ-ಮುಗ್ಗಟ್ಟುಗಳು, ಹಣ್ಣಿನ ಅಂಗಡಿಗಳು, ಕಬ್ಬಿನ ಗಾಡಿಗೆ ಹಾನಿ ಮಾಡಿದ್ದಾರೆ. ಆದರೆ, ಈ ವೇಳೆಯಲ್ಲಿ ನೂರಾರು ಜನ ಪೊಲೀಸರು ಇದ್ದರು ಅಸಾಯಕರಾಗಿದ್ದಾರೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ಕಲ್ಲು ತೂರಿದ ಯುವಕರು ಅಪಾರ ಹಾನಿ ಉಂಟು ಮಾಡಿದ್ದಾರೆ.
ನಂತರ ನಗರದ ರೋಟರಿ ಜಿತಾಗಾರದಲ್ಲಿ ರಿಷಿಕುಮಾರ ಸ್ವಾಮೀಜಿ ನೇತ್ರತ್ವದಲ್ಲಿ ಹರ್ಷ ಅವರ ತಂದೆ ಚಿತೆಗೆ ಬೆಂಕಿ ಇಟ್ಟಿದ್ದಾರೆ. ಇದಾದ ನಂತರ ಹಿರಿಯ ಅಧಿಕಾರಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ ಅವರು ಸಭೆ ನಡೆಸಿದರು.
ಇದಾದ ನಂತರ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದರು. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಶಿವಮೊಗ್ಗ ಇನ್ನೂ ಕಾದ ಕೆಂಡದಂತಾಗಿರುವುದು ಸುಳ್ಳಲ್ಲ.
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ: ಎಡಿಜಿಪಿ ಪ್ರತಾಪ್ ರೆಡ್ಡಿ