ಶಿವಮೊಗ್ಗ: ತಾನೇ ನಿರ್ಮಿಸಿದ ಐದು ಅಂತಸ್ತಿನ ಕಟ್ಟಡದಿಂದ ಗುತ್ತಿಗೆದಾರನೋರ್ವ ಜಿಗಿಯಲು ಯತ್ನಿಸಿದ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ.
ಗಾಡಿಕೊಪ್ಪದಲ್ಲಿ ಸಾಯಿ ಶಾರದ ಎಂಬ ಹೆಸರಿನಲ್ಲಿ ಐದು ಅಂತಸ್ತಿನ ಅಪಾರ್ಟಮೆಂಟ್ ನಿರ್ಮಾಣವಾಗುತ್ತಿದೆ. ಈ ಕಟ್ಟಡದ ಕಾಮಗಾರಿಗೆ ಸೆಂಟ್ರಿಂಗ್ ನೀಡಿದ ಗೌತಮ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿರುವ ಗುತ್ತಿಗೆದಾರ. ಈತ ಕಟ್ಟಡ ನಿರ್ಮಾಣಕ್ಕೆ ಸುಮಾರು 82 ಲಕ್ಷ ರೂಪಾಯಿ ವೆಚ್ಚವಾಗುವಷ್ಟು ಕೆಲಸ ಮಾಡಿದ್ದಾರೆ. ಈಗ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ತಮಗೆ ಕಟ್ಟಡದ ಗುತ್ತಿಗೆದಾರ ಗಣೇಶ್ ಎಂಬುವರು ಬಾಕಿ 21 ಲಕ್ಷ ರೂಪಾಯಿ ನೀಡುತ್ತಿಲ್ಲ ಎಂದು ಆರೋಪಿಸಿ, ಇಂದು ಕಟ್ಟಡದ ಮೇಲಿಂದ ಜಿಗಿಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಗೌತಮ್ ಅವರ ಕುಟುಂಬದವರು ಹಾಗೂ ಅಗ್ನಿಶಾಮಕ ದಳದವರು ಬಂದು ಕೆಳಗೆ ಹಾರಿದರೆ ರಕ್ಷಿಸಲು ಪೂರ್ವತಯಾರಿ ನಡೆಸುತ್ತಿದ್ದರು. ಅದೇ ವೇಳೆ ತುಂಗಾನಗರ ಪಿಎಸ್ಐ ತಿರುಮಲೇಶ್ ಅವರು ಬಂದು ಕೆಳಗಿನಿಂದ ಗೌತಮ್ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಅದು ಫಲ ನೀಡದೆ ಹೋದಾಗ ಕಟ್ಟಡವನ್ನು ಏರಿ ಗೌತಮ್ ಮನವೊಲಿಸಿ ಕೆಳಗೆ ಕರೆದುಕೊಂಡು ಬಂದಿದ್ದಾರೆ.
ಕಟ್ಟಡದಿಂದ ಇಳಿದು ಬಂದ ನಂತರ ಗೌತಮ್ ಪೊಲೀಸರೊಂದಿಗೆ ಮಾತನಾಡಿ, ತನಗೆ ನೀಡಬೇಕಾದ ಹಣವನ್ನು ನೀಡದೆ ಗುತ್ತಿಗೆದಾರ ಗಣೇಶ ಮೋಸ ಮಾಡುತ್ತಿದ್ದಾರೆ. ಆತನ ಮೋಸದಿಂದ ತಾನು ಸಾಲಗಾರನಾಗಿದ್ದು, ಸಾಲಗಾರರು ಹಣ ಕೇಳಿಕೊಂಡು ನನ್ನ ಮನೆಯ ಬಳಿ ಬರುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ.
ಆದ್ರೆ ಈ ವಿಚಾರವಾಗಿ ಕಟ್ಟಡದ ಗುತ್ತಿಗೆದಾರ ಗಣೇಶ್ ಹೇಳುವುದೇ ಬೇರೆ, ಕಟ್ಟಡದ ನಿರ್ಮಾಣಕ್ಕಾಗಿ ಗೌತಮ್ ಅವರಿಗೆ 82 ಲಕ್ಷ ರೂಪಾಯಿ ಅದಾಗಲೇ ನೀಡಲಾಗಿದೆ. ಇದರಲ್ಲಿ ಕೆಲಸವಾಗಿರುವುದು ಕೇವಲ 80 ಲಕ್ಷ ರೂಪಾಯಿಯದ್ದು ಮಾತ್ರ. ಗೌತಮ್ ಅವರೇ ನನಗೆ 2.50 ಲಕ್ಷ ರೂಪಾಯಿ ವಾಪಸ್ ನೀಡಬೇಕು. ಆತ ಹಣ ಕೊಡಬೇಕಾಗುತ್ತದೆ ಎಂದು ಆತ್ಮಹತ್ಯೆಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣಕಾಸಿನ ವಿಚಾರದಲ್ಲಿ ತಾನೇ ನಿರ್ಮಾಣ ಮಾಡಿದ ಕಟ್ಟಡದ ಮೇಲಿನಿಂದಲೇ ವ್ಯಕ್ತಿ ಜಿಗಿಯಲು ಹೋಗಿದ್ದು, ಒಂದು ರೀತಿಯ ಹೈಡ್ರಾಮಾವೇ ಸೃಷ್ಟಿ ಆಗಿತ್ತು. ಸದ್ಯ ಪಿಎಸ್ಐ ತಿರುಮಲೇಶ್ ಅವರ ಮಧ್ಯಸ್ಥಿಕೆಯಿಂದ ಆತ್ಮಹತ್ಯೆ ಯತ್ನಕ್ಕೆ ಬ್ರೇಕ್ ಬಿದ್ದಿದೆ.