ಶಿವಮೊಗ್ಗ: ಆರು ದಶಕಗಳ ಹಿಂದೆ ಇಡೀ ನಾಡಿಗೆ ಬೆಳಕು ಕೊಡಲು ತಮ್ಮ ಬದುಕನ್ನು ತ್ಯಾಗ ಮಾಡಿದ ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ಪುನರ್ವಸತಿ ಯೋಜನೆಯ ಅರಣ್ಯ ಭೂಮಿ ಡಿನೋಟಿಫಿಕೇಶನ್ ರದ್ದುಪಡಿಸಿ, ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕಾಗೋಡು ತಿಮ್ಮಪ್ಪ ಒತ್ತಾಯಿಸಿದರು.
ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತಿ ಸಮಿತಿ ವತಿಯಿಂದ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಬೇಕು. ಬಾಕಿ ಉಳಿದಿರುವ ಸರ್ಕಾರಿ ಆದೇಶಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಹೋರಾಟಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು. ಸಂತ್ರಸ್ತರ ಪುನರ್ ವಸತಿಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 9 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲಾಗಿತ್ತು. 1 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿತ್ತು. ಆದರೆ, ಪರಿಸರವಾದಿಯೊಬ್ಬರು ಡಿನೋಟಿಫಿಕೇಶನ್‌ಗೆ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಸಾವಿರಾರು ರೈತ ಕುಟುಂಬಗಳು ಭೂವಂಚಿತರಾಗಿದ್ದಾರೆ ಎಂದರು.
ಇದನ್ನೂ ಓದಿ: ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನ.28ರಂದು ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ತನಕ ಹೋರಾಟ ನಡೆಸಲಾಗುವುದು. ಶರಾವತಿ ಸಂತ್ರಸ್ತರ ಭೂ ಹಕ್ಕಿನ ವಿಚಾರವನ್ನು ಈ ಬಾರಿಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುತ್ತೇನೆ. ಜನರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಲಿ- ಮಧು ಬಂಗಾರಪ್ಪ
ತೀ.ನಾ ಶ್ರೀನಿವಾಸ್ ಮಾತನಾಡಿ, ಕಳೆದ ಆರು ದಶಕಗಳ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ಡಬಲ್ ಇಂಜಿನ್ ಸರ್ಕಾರಕ್ಕೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸಿದ ಕಾರಣ ಇಂದು ಭೂ ವಂಚಿತರಾಗಬೇಕಾಗಿದೆ ಎಂದು ದೂರಿದರು.
ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡಲು 98 ಸರ್ಕಾರಿ ಆದೇಶ ಹೊರಡಿಸಿದೆ. ಇದರಲ್ಲಿ 56 ಅಧಿಸೂಚನೆಯನ್ನು ರದ್ದು ಮಾಡಿ ಆದೇಶಿಸಿದ ರಾಜ್ಯ ಸರ್ಕಾರದ ನಡೆ ರೈತ ವಿರೋಧಿಯಾಗಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿ 56 ಅಧಿಸೂಚನೆಯಲ್ಲಿ 26 ಅಧಿಸೂಚನೆಗೆ ಮಾತ್ರ ಅನುಮತಿ ಕೇಳಿದ್ದಾರೆ. ಬಾಕಿ ಉಳಿದ 30 ಅಧಿಸೂಚನೆಗೆ ಅನುಮತಿ ಬೇಡವಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಶರಾವತಿ ಸಂತ್ರಸ್ತರ ಪುನರ್ವಸತಿ ಅರಣ್ಯ ಭೂಮಿ ಡಿನೋಟಿಫೈಗೆ ಅನುಮತಿಸಿ: ಕೇಂದ್ರಕ್ಕೆ ಬಿಎಸ್ವೈ ಮನವಿ
ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆ.ಬಿ ಪ್ರಸನ್ನ ಕುಮಾರ್, ಶರಾವತಿ ಮುಳುಗಡೆ ಸಂತ್ರಸ್ತರ ಕಾಂಗ್ರೆಸ್ ಜಾಗೃತ ಸಮಿತಿ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್, ಮುಖಂಡರಾದ ರಾಜ ನಂದಿನಿ, ರಮೇಶ್ ಹೆಗಡೆ, ಜಿ.ಡಿ ಮಂಜುನಾಥ್, ಶ್ರೀನಿವಾಸ್ ಕರಿಯಣ್ಣ ಸೇರಿದಂತೆ ಹಲವರಿದ್ದರು.