ಶಿವಮೊಗ್ಗ: ಭತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರವನ್ನು ತೆರೆದು ತಕ್ಷಣವೇ ಖರೀದಿ ಮಾಡಬೇಕು ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್. ಆರ್ ಬಸವರಾಜಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಕ್ಕೆಜೋಳ ಬೆಲೆ ಕಟಾವಿಗೆ ಬಂದಿದ್ದು ಸರ್ಕಾರ ಕೂಡಲೇ ಭತ್ತ ಮತ್ತು ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಖರೀದಿ ಕೇಂದ್ರ ತೆರೆಯಬೇಕು. ಮೆಕ್ಕೆಜೋಳ ಬೆಂಬಲ ಬೆಲೆ ಕ್ವಿಂಟಾಲ್ಗೆ 1,860 ರೂ. ಇದ್ದರೆ ಅದು ಮಾರುಕಟ್ಟೆಯಲ್ಲಿ ಕೇವಲ 1,000 ರೂ.ಗೆ ಕುಸಿದಿದೆ. ವರ್ತಕರು ಇದರ ದುರ್ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಭತ್ತ ಮತ್ತು ಮೆಕ್ಕೆಜೋಳಕ್ಕೆ 3,000 ರೂ. ನಿಗದಿಪಡಿಸಿ ಖರೀದಿ ಕೇಂದ್ರ ತೆರೆಯಬೇಕು. ಹಾಗೂ 10 ಸಾವಿರ ಕೋಟಿ ರೂ. ಗಳ ಆವರ್ತಕ ನಿಧಿಯನ್ನು ಇಡಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ರೈತರು ಬೆಳೆದ ಬೆಳೆಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.