ಶಿವಮೊಗ್ಗ: ಜಿಲ್ಲೆಯ ಕಾಲೇಜುಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಕಾಂತರಾಜು ತಿಳಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ಮಾಧ್ಯಮಗಳಲ್ಲೂ ವರದಿಯಾಗುತ್ತಿವೆ. ವಿಶೇಷವಾಗಿ ಕಾಲೇಜುಗಳಲ್ಲಿ ಗಾಂಜಾ ಮಾರಾಟದ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಇತ್ತೀಚಿಗೆ ಸೈಬರ್ ಕ್ರೈಂ ಸಹ ಹೆಚ್ಚಾಗುತ್ತಿದ್ದು, ಅಪರಿಚಿತರು ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗಳನ್ನು ಕನ್ನ ಹಾಕುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಬ್ಯಾಂಕ್ನವರು ದೂರವಾಣಿ ಮೂಲಕ ಯಾವುದೇ ಮಾಹಿತಿ ಪಡೆಯುವುದಿಲ್ಲ. ಹಾಗಾಗಿ ನಾಗರಿಕರು ಇಂತಹ ಕರೆಗಳ ಬಗ್ಗೆ ಎಚ್ಚರವಹಿಸಬೇಕು. ಅಪರಿಚಿತರ ಕರೆ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.