ಶಿವಮೊಗ್ಗ: 2019-20ನೇ ಸಾಲಿನ ಎಸ್ಬಿಎಮ್ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸಲಾದ ಸ್ವಚ್ಛ ಮೇವ ಜಯತೆ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಆಯೋಜಿಸಲಾದ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಅನುಷ್ಠಾನದಲ್ಲಿ ಸುಮಾರು 23 ಲಕ್ಷ ರೂ.ಯಷ್ಟು ಅವ್ಯವಹಾರ ನಡೆದಿದೆ. ಈ ಹಿಂದೆ ಅನುಷ್ಠಾನದಲ್ಲಿದ್ದ ಗೋಬರ್ ಗ್ಯಾಸ್ ಸ್ಥಾವರ ಅಳವಡಿಕೆಯಲ್ಲೂ ಅಕ್ರಮ ನಡೆದಿರಬಹುದು. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆರ್. ಪ್ರಸನ್ನ ಕುಮಾರ್ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನಿಖೆಯನ್ನು ಒಂದು ತಿಂಗಳ ಒಳಗೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗುವುದು. ಅವ್ಯವಹಾರ ಆರೋಪದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಭರವಸೆ ನೀಡಿದರು.