ಶಿವಮೊಗ್ಗ : ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಮನೆಗೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಇಂದು ಹಿಂದೂ ಜಾಗರಣ ವೇದಿಕೆಯಿಂದ ನಡೆದ 3ನೇ ಪ್ರಾಂತ ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗಿಯಾಗಿ ನಂತರ ಶಿವಮೊಗ್ಗದ ಸಿಗೇಹಟ್ಟಿ ಬಡಾವಣೆಯಲ್ಲಿನ ಹರ್ಷನ ಮನೆಗೆ ಭೇಟಿ ನೀಡಿದ್ದಾರೆ. ಹರ್ಷನ ತಂದೆ, ತಾಯಿ, ಸಹೋದರಿಯರನ್ನು ಭೇಟಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಹರ್ಷನ ಸಾವಿಗೆ ಸಂತಾಪ ಸೂಚಿಸಿದರು.
ಕೊಲೆ ಪ್ರಕರಣ ಹಿನ್ನೆಲೆ : ಫೆಬ್ರವರಿ 20ರಂದು ರಾತ್ರಿ 9ರ ಸುಮಾರಿಗೆ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಆಗಿತ್ತು. ಅಂದು ರಾತ್ರಿ ಊಟಕ್ಕೆಂದು ಹರ್ಷ ಹೊರಗಡೆ ಹೋದಾಗ ನದೀಮ್ ಮತ್ತು ಖಾಸೀಫ್ ಎಂಬುವವರಿಂದ ಕೃತ್ಯವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚನ ಮೂಡಿಸಿತ್ತು.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ಬಾರಿ ಚರ್ಚೆಗಳು ನಡೆಯುತ್ತಿದ್ದವು. ಎರಡು ಕೋಮುಗಳ ನಡುವಿನ ತಿಕ್ಕಾಟವೂ ಹೆಚ್ಚಾಗಿಯೇ ಇತ್ತು. ಇದರಿಂದ ರಾಜಕೀಯವಾಗಿ ಬೆಳವಣಿಗೆಯೂ ಹೆಚ್ಚಾಗಿತ್ತು. ಈ ವೇಳೆ ಹರ್ಷನ ಹತ್ಯೆ ಶಿವಮೊಗ್ಗ ನಗರದಲ್ಲಿ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತ್ತು.
ನಿಷೇಧಾಜ್ಞೆಯ ನಡುವೆಯೂ ಮೆರವಣಿಗೆ: ಶಿವಮೊಗ್ಗದಲ್ಲಿ ನಿಷೇಧಾಜ್ಞೆಯ ನಡುವೆಯೂ ಹರ್ಷನ ಮೃತದೇಹವನ್ನು ಮೆರವಣಿಗೆ ಮಾಡಲಾಗಿತ್ತು. ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಅಲ್ಲದೇ ಹರ್ಷನ ಕೊಲೆ ಹಿಂದೆ ದೊಡ್ಡ ಪಿತೂರಿಯೇ ಇದೆ ಎಂದು ಸರ್ಕಾರ ಪ್ರಕರಣವನ್ನು ಹೆಚ್ಚಿನ ತನಿಖೆ ವಹಿಸಲು ಚಿಂತಿಸಿತ್ತು. ಪೊಲೀಸರ ಪ್ರಾಥಮಿಕ ವರದಿ ಪಡೆದು ಮುಂದಿನ ನಿರ್ಧಾರಕ್ಕೆ ಸರ್ಕಾರ ಚಿಂತಿಸಿತ್ತು.
ಹರ್ಷ ಸಕ್ರಿಯ ಹಿಂದೂ ಕಾರ್ಯಕರ್ತನಾಗಿದ್ದ. ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶವಾಗಿದ್ದರಿಂದ ಹರ್ಷನನ್ನು ಕೊಂದರೆ ಭಯದ ವಾತಾವರಣ ನಿರ್ಮಾಣ ಮಾಡಬಹುದು ಎಂದು ಈ ಕೃತ್ಯvನ್ನು ಆರೋಪಿಗಳು ಎಸಗಿದ್ದರು. ಇದರಿಂದಲೇ ಹರ್ಷನನ್ನು ಹದಿನೈದು ದಿನಗಳ ಕಾಲ ಗಮನಿಸಿ ಕೊಲೆಯನ್ನು ಮಾಡಲಾಗಿದೆ ಎಂದು ಮೊದಲ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.
ಎನ್ಐಎಗೆ ಹರ್ಷ ಪ್ರಕರಣ ಹಸ್ತಾಂತರ: ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿಯೇ ತೆಗೆದುಕೊಂಡಿತ್ತು. ಪ್ರಾಥಮಿಕ ತನಿಖೆಯನ್ನು ನಡೆಸಿದ ನಂತರ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಹಿಸಲಾಗಿತ್ತು.
ಹಿಜಾಬ್ ವಿವಾದದ ಮಧ್ಯೆಯೇ ನಡೆದ ಹತ್ಯೆ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಿತ್ತು. ಈ ಮಧ್ಯೆಯೇ ಸರ್ಕಾರ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿತ್ತು. ತನಿಖೆ ಕೈಗೊಂಡಿದ್ದ ಎನ್‌ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ 750 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ನ್ನು ಸಲ್ಲಿಕೆ ಮಾಡಿದ್ದರು.
ಚಾರ್ಜ್ ಶೀಟ್ನಲ್ಲಿ: ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹತ್ತು ಜನ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿತ್ತು. ಇನ್ನು ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡುವ ಉದ್ದೇಶ ಇತ್ತು. 15 ದಿನದಿಂದ ಹರ್ಷನ ಹತ್ಯೆಗೆ ಕಾದು ಪ್ಲಾನ್ ಮಾಡಿ ಹತ್ಯೆ ಮಾಡಲಾಗಿದೆ. ಹರ್ಷ ಹಿಂದೂ ಸಂಘಟನೆಯಲ್ಲಿ ಆ್ಯಕ್ಟಿವ್ ಇದ್ದು, ಹಳೆಯ ದ್ವೇಷ ಇಟ್ಟುಕೊಂಡು ಹತ್ಯೆ ಮಾಡೋಕೆ ಪ್ರಕರಣದ ಎ1 ಆರೋಪಿ ಆಯ್ಕೆ ಮಾಡಿದ್ದ. ಇದಲ್ಲದೆ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದು ತಮಗೆ ವಿರೋಧಿಯಾಗಿರೋ ಹರ್ಷ ಕೊಲೆ ಮಾಡುವ ಮೂಲಕ ಜಿಲ್ಲೆಯಲ್ಲಿ ಭಯ ಹುಟ್ಟಿಸುವುದು ಆರೋಪಿಗಳ ಉದ್ದೇಶವಾಗಿತ್ತು ಎಂಬುದು ಆರೋಪ ಪಟ್ಟಿಯಲ್ಲಿ ಎನ್‌ಐಎ ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಇದನ್ನೂ ಓದಿ: ಜಗತ್ತಿನ ಶ್ರೇಷ್ಠ ಋಷಿ ಪರಂಪರೆಯ ಪ್ರತಿನಿಧಿಗಳು ಹಿಂದೂಗಳು: ರಘುನಂದನ್