ಶಿವಮೊಗ್ಗ: ರಾಗಿಯನ್ನು ಕೈಯಲ್ಲಿ ಹಿಡಿದಿಡುವುದೇ ಕಷ್ಟ. ಅತಿ ಚಿಕ್ಕ ಧಾನ್ಯವಾದ ಇದು, ಮುಷ್ಟಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದರೆ ನುಣುಚಿಕೊಳ್ಳುವುದೇ ಹೆಚ್ಚು. ಅಂತಹದ್ದರಲ್ಲಿ ಕನ್ನಡಗಿನೋರ್ವ ರಾಗಿ ಎಣಿಸುವ ಮೂಲಕ ಸಾಧನೆಗೈದು ಎಲ್ಲರ ಹುಬ್ಬೇರಿಸಿದ್ದಾರೆ. ಸಚಿನ್ ಎಂಬಾತ ರಾಗಿ ಎಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಆಯ್ಕೆಯಾಗುವ ಮೂಲಕ ತನ್ನ ಕುಟುಂಬಸ್ಥರಲ್ಲಿ ಸಂತಸ ಮೂಡಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ಸಚಿನ್ ಸದ್ಯ ಶಿವಮೊಗ್ಗದಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಮೊದಲು ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಕೈಗೊಂಡು ನಂತರ ಇದನ್ನು ಅರ್ಧಕ್ಕೆ ಮೊಟಕುಗೊಳಿಸಿ ಈಗ ಬಿ.ಕಾಂ ಓದುತ್ತಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಮೊಟಕುಗೊಳಿಸಿದ್ದಕ್ಕೆ ಈತನ ಕುಟುಂಬಸ್ಥರು ಬೇಸರಗೊಂಡಿದ್ದರು. ಆದ್ರೀಗ ಸಚಿನ್ ರಾಗಿ ಎಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದ್ದಕ್ಕೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಒಂದು ಕೆ.ಜಿ. ರಾಗಿಯಲ್ಲಿ 3,76,083 ಕಾಳುಗಳು ಇವೆ ಎಂಬುದನ್ನು ಸಚಿನ್ ಎಣಿಕೆ ಮೂಲಕ ತೋರಿಸಿದ್ದಾರೆ. 500 ರಾಗಿ ಕಾಳನ್ನು ಒಂದು ಪ್ಯಾಕೇಟ್ನಲ್ಲಿ ಹಾಕಿ, ಇಡೀ ಒಂದು ಕೆ.ಜಿ. ರಾಗಿಯನ್ನು ಎಣಿಸಿದ್ದಾರೆ. ಈ ರಾಗಿ ಕಾಳು ಎಣಿಸಲು 146 ಗಂಟೆ 30 ನಿಮಿಷ ಸಮಯ ತೆಗೆದುಕೊಂಡಿದ್ದಾರೆ. ಒಂದು ರಾಗಿ ಕಾಳನ್ನು ಕೈಯಲ್ಲಿ ಹಿಡಿಯಲು ಆಗುವುದಿಲ್ಲ, ಸರಿಯಾಗಿ ಕಣ್ಣಿನಲ್ಲೂ ನೋಡಲು ಸಹ ಆಗಲ್ಲ. ಇಂತಹ ಕ್ಲಿಷ್ಟಕರ ಕೆಲಸವನ್ನು ಸಚಿನ್ ಅತ್ಯಂತ ತಾಳ್ಮೆಯಿಂದ ಎಣಿಕೆ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅರಣ್ಯ ಇಲಾಖೆ ಕಾರ್ಯಾಚರಣೆಯಿಂದಾಗಿ ತುಮಕೂರಿನಲ್ಲಿ ಚಿರತೆ ಹಾವಳಿ ಕಡಿಮೆಯಾಗಿದೆಯೇ?
ಸಚಿನ್ ಅವರು ತಮ್ಮ ಸಾಧನೆಯನ್ನು ದಾಖಲೆಯಾಗಿಸಲು ಇಂಡಿಯಾ ಬುಕ್ ಆಫ್ ರೆಕಾರ್ಡ್ ಕಚೇರಿ ಸಂಪರ್ಕಿಸಿ ಅವರಿಗೆ ತಮ್ಮ ಸಾಧನೆಯ ಬಗ್ಗೆ ವಿವರಿಸಿದ್ದಾರೆ. ನಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ನವರು ವಿಡಿಯೋ ಕಾಲ್ ಮೂಲಕ ತಿಳಿದುಕೊಂಡು ಸಚಿನ್ ಅವರಿಗೆ ಕೋರಿಯರ್ ಮೂಲಕ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮಾಡದೆ ಕೋರಿಯರ್ ಮೂಲಕ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.