ಶಿವಮೊಗ್ಗ: ಮುಂಗಾರು ಆರಂಭದಿಂದ ಹಿಡಿದು ಡಿಸೆಂಬರ್ವರೆಗೂ ಮಲೆನಾಡಿನ ಹೆಬ್ಬಾಗಿಲೆಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಜೋಗ ವೀಕ್ಷಣೆಗಾಗಿಯೇ ಬರುವವರ ಸಂಖ್ಯೆ ಅಸಂಖ್ಯಾತ. ಇದೀಗ ಕೊರೊನಾ ಭೀತಿಯಿಂದ ಜೋಗ ಪ್ರವಾಸ ಕೈಗೊಳ್ಳುವ ಜನರಿಗೆ ಇಲ್ಲಿನ ಜಿಲ್ಲಾಡಳಿತ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.
ಜೋಗ ಜಲಪಾತದ ಪ್ರವೇಶ ದ್ವಾರದಲ್ಲಿಯೇ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರವೇ ಒಳಬಿಡಲಾಗುತ್ತಿದೆ. ಜಲಪಾತ ವೀಕ್ಷಣೆಗೆ 72 ಗಂಟೆಗಳ ಹಿಂದೆ ಪಡೆದಿರುವ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಇರಬೇಕು. ಇಲ್ಲವೇ ಎರಡು ಡೋಸ್ ಲಸಿಕೆ ಪಡೆದ ದಾಖಲೆ ಇರಬೇಕು.
ಈ ಬಗ್ಗೆ ಮಾಹಿತಿಯಿಲ್ಲದೆ, ಯಾವುದೇ ದಾಖಲೆಗಳಿಲ್ಲದೆ ಜೋಗಕ್ಕೆ ಬರುವ ಪ್ರವಾಸಿಗರು ಜೋಗದ ಪ್ರವೇಶ ದ್ವಾರದಲ್ಲಿಯೇ ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದ ನಡೆಸುವವರು ಹಾಗೂ ಜೋಗ ನೋಡಲು ಖುಷಿಯಿಂದ ಬಂದು ನಿರಾಸೆಯಿಂದ ವಾಪಸ್ ಹೋಗುವ ದೃಶ್ಯಗಳು ಸಾಮಾನ್ಯ ಎನ್ನುವಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇದು ಜಿಲ್ಲೆಗೆ ಬರುವ ಪ್ರವಾಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ತೆರಳುತ್ತಿದ್ದಾರೆ.