ಶಿವಮೊಗ್ಗ: ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಪೋಷಕರು ಭಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಆರ್.ಟಿ.ಒ ಅಧಿಕಾರಿ ಗಂಗಾಧರ್ ಅವರು ಪೋಷಕರಿಗು, ಮಕ್ಕಳು ಮತ್ತು ಕಾಲೇಜು ಪ್ರಾಂಶುಪಾಲರಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುಗಮ ಸಂಚಾರ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಪೋಷಕರು ದಂಡ ಕಟ್ಟುವುದರ ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಕಾಲೇಜಿಗೆ ವಾಹನ ತಂದರೆ ಪ್ರಾಂಶುಪಾಲರೇ ಹೊಣೆಗಾರರಾಗುತ್ತಾರೆ ಎಂದಿದ್ದಾರೆ.
ಕಳೆದ ವಾರ ಶಿವಮೊಗ್ಗ ಆರ್.ಟಿ.ಒ ಕಚೇರಿ ಮುಂಭಾಗ ಬೈಕಿನಲ್ಲಿ ಬಂದ ಇಬ್ಬರನ್ನು ತಡೆದು ವಯಸ್ಸು ವಿಚಾರಿಸಿದ್ದೆ. ಇಬ್ಬರು ಅಪ್ರಾಪ್ತ ವಯಸ್ಕರಾಗಿದ್ದರು. ಕೂಡಲೇ ಬೈಕನ್ನು ಸೀಜ್ ಮಾಡಿದ್ದೆ. ಆಗ ಅವರ ಪೋಷಕರು ವಾಹನ ಬಿಟ್ಟುಕೊಡುವಂತೆ ಮನವಿ ಮಾಡಿದರು. ಆದರೆ ದಂಡ ಕಟ್ಟದೆ ವಾಹನ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದೆ ಎಂದರು.
ಇದೆ ವೇಳೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ಅಪ್ರಾಪ್ತನ ಕೈಗೆ ಬೈಕು ಕೊಟ್ಟರೆ ಪೋಷಕರಿಗೆ ದಂಡ ಮತ್ತು ಜೈಲು ಶಿಕ್ಷೆಯಾಗುತ್ತದೆ. ತೀರ್ಥಹಳ್ಳಿಯ ಒಂದು ಪ್ರಕರಣದಲ್ಲಿ ಪೋಷಕರು ಶಿಕ್ಷೆ ಅನುಭವಿಸುತ್ತಿದ್ದಾರೆ. ಅಪ್ರಾಪ್ತರ ಕೈಗೆ ವಾಹನ ಕೊಟ್ಟರೆ ಮೊದಲು 25 ಸಾವಿರ ರೂ. ದಂಡ ಕಟ್ಟಬೇಕು. ಆ ಬಳಿಕ ಜೈಲು ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.
ಪ್ರಾಂಶುಪಾಲರಿಗೂ ತಟ್ಟಲಿದೆ ಬಿಸಿ: ಆರ್.ಟಿ.ಒ ಅಧಿಕಾರಿ ಗಂಗಾಧರ್ ಮಾತನಾಡಿ, ಪಿಯುಸಿ, ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಕಾಲೇಜಿಗೆ ಬೈಕುಗಳನ್ನು ತರುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು ಕಾಲೇಜಿಗೆ ವಾಹನಗಳನ್ನು ತಂದರೆ ಪ್ರಾಂಶುಪಾಲರೇ ಹೊಣೆಯಾಗುತ್ತಾರೆ. ಇಂತಹ ಸಂದರ್ಭ ಪ್ರಾಂಶುಪಾಲರ ವಿರುದ್ಧವು ಪ್ರಕರಣ ದಾಖಲಿಸಬಹುದಾಗಿದೆ ಎಂದು ಎಚ್ಚರಿಕೆ ನೀಡಿದರು.
ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಡಾ. ವೀಣಾ ಅವರು ಮಾತನಾಡಿ, ತಮ್ಮ ಕಾಲೇಜು ಬಳಿ ಥ್ರಿಬಲ್ ರೈಡಿಂಗ್ ಹಾವಳಿ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳು ಬೈಕಿನಲ್ಲಿ ಮೂವರು ಸಂಚರಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ಡಿವೈಎಸ್‌ಪಿ ಬಾಲರಾಜ್, ಸಂಚಾರಿ ಠಾಣೆ ಇನ್ಸ್‌ಪೆಕ್ಟರ್ ಡಿ.ಕೆ ಸಂತೋಷ್ ಇದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಪ್ರಚೋದನಕಾರಿ ಹೇಳಿಕೆ.. ಸಾದ್ವಿ ಪ್ರಜ್ಞಾ ಸಿಂಗ್ ವಿರುದ್ಧ ಪ್ರಕರಣ