ಶಿವಮೊಗ್ಗ: ನಾಳೆ ಭದ್ರಾವತಿಗೆ ಆಗಮಿಸಲಿರುವ ಗೃಹ ಸಚಿವ ಅಮಿತ್ ಶಾ, ಜಿಲ್ಲೆಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸುವ ದಿನಾಂಕವನ್ನು ಪ್ರಕಟಿಸಬೇಕು ಎಂದು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ, 500 ಕೋಟಿ ರೂಗಳ ವೆಚ್ಚದಲ್ಲಿ ಜಿಲ್ಲೆಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದಿದ್ದರು. ಆದರೆ ಈಗ ಆ ಭರವಸೆ ಹುಸಿಯಾಗಿದೆ.
ಅಡಿಕೆ ಬೆಳೆಗಾರ ಹೀತ ಕಾಪಾಡುತ್ತವೆ ಎನ್ನುವ ಕೇಂದ್ರ ಸರ್ಕಾರ ಇದುವರೆಗೂ ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿಲ್ಲ. ಅಡಿಕೆ ಬೆಳೆಗಾರರು ಒಳಗೊಂಡ ತಜ್ಞರ ಸಮಿತಿ ಸಹ ನೇಮಕ ಮಾಡಿಲ್ಲ. ಅಡಿಕೆಯನ್ನು ಅಸ್ತ್ರವನ್ನಾಗಿಸಿಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಗೆದ್ದ ನಂತರ ಬೆಳೆಗಾರರ ಸಮಸ್ಯೆಯ ಬಗ್ಗೆ ನೀಡಿದ ಭರವಸೆಯ ಬಗ್ಗೆ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನ ಹರಿಸುತ್ತಿಲ್ಲ ಎಂದು ರಮೇಶ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.