ಶಿವಮೊಗ್ಗ: ಜನರ ಬದುಕನ್ನು ಅರಳಿಸುವಂತಹ, ಬದುಕನ್ನು ರೂಪಿಸುವಂತಹ ಕಾಂಗ್ರೆಸ್ ಬೇಡವಾಗಿದೆ. ಜನರ ಭಾವನೆಯನ್ನು ಕೆರಳಿಸುವಂತಹ ಬಿಜೆಪಿ ಬೇಕಾಗಿರುವುದು ವಿಷಾದನೀಯ ಎಂದು ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ರಮೇಶ್ ಹೆಗಡೆ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಬಗರ್ ಹುಕುಂ ಜನರನ್ನು ಚುನಾವಣೆಗಾಗಿಯೇ ಇಟ್ಟುಕೊಂಡಿದ್ದಾರೆಯೇ ಹೊರತು ಅವರ ಸಮಸ್ಯೆಗಳನ್ನು ಪರಿಹರಿಸಲು ಅಲ್ಲ. ಯುಪಿಎ ಸರ್ಕಾರ ಬಂದ್ರೆ ಮಾತ್ರ ಜನರ ಭೂ ಹಕ್ಕಿನ ಸಮಸ್ಯೆ ಹರಿಹರಿಸಲು ಸಾಧ್ಯವಾಗುತ್ತದೆ ಎಂದರು.
ಭೂಮಿಯ ಹಕ್ಕು ತಂದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು. ಉಳುವವನೆ ಭೂ ಒಡೆಯ, ಭೂ ಸುಧಾರಣೆ ಕಾಯ್ದೆ, ಬಗರ್ ಹುಕುಂ ಶಾಸನ, ಅನುಸೂಚಿತ ಬುಡಕಟ್ಟು, ಅರಣ್ಯ ಕಾಯ್ದೆ, ಮನೆಗಳಿಗೆ ಹಕ್ಕು ಪತ್ರ ನೀಡಿದ್ದು ಕಾಂಗ್ರೆಸ್ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಜಾರಿಗೆ ತಂದ ಬಾಲಸುಬ್ರಹ್ಮಣ್ಯಂ ವರದಿಯಿಂದ ಮಲೆನಾಡಿನ ನೂರಾರು ರೈತರು ಇಂದು ಅಪರಾಧಿಗಳಾಗಿ ಭೂ ನ್ಯಾಯ ಮಂಡಳಿಯ ಮುಂದೆ ಅಲೆಯುವಂತಾಗಿದೆ ಎಂದು ರಮೇಶ್ ಹೆಗಡೆ ಆರೋಪಿಸಿದ್ದಾರೆ. ಈ ವೇಳೆ ಮುಖಂಡರುಗಳಾದ ಗಿರೀಶ್, ಚೇತನ್, ಬಾಲಾಜಿ ಸೇರಿದಂತೆ ಇತರರು ಹಾಜರಿದ್ದರು.