ಶಿವಮೊಗ್ಗ: 'ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದೇನೆ. ಅಧಿಕಾರದಲ್ಲಿದ್ದಾಗ ನೌಕರರ ಪರ ಮಾಡಿರುವ ಸಾಧನೆಗಳನ್ನು ಗುರುತಿಸಿ ನಮಗೆ ಮತ್ತೊಮ್ಮೆ ಅವಕಾಶ ನೀಡಿ' ಎಂದು ಸಂಘದ ಮಾಜಿ ಅಧ್ಯಕ್ಷ ರಘುರಾಮ್ ದೇವಾಡಿಗ ಮನವಿ ಮಾಡಿಕೊಂಡಿರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಂಘದ ನಿರ್ದೇಶಕ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಜೂನ್ 13ರಂದು ಚುನಾವಣೆ ನಡೆಯಲಿದೆ. ಈಗಾಗಲೇ 20 ಇಲಾಖೆಯಿಂದ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆಯುವ ಚುನಾವಣೆಯಲ್ಲಿ 27 ಇಲಾಖೆಗಳಿಂದ 47 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಅಲ್ಲದೆ, ಆರು ತಾಲೂಕು ಅಧ್ಯಕ್ಷರ ಆಯ್ಕೆಗೂ ಮತದಾನ ಜರುಗುತ್ತದೆ. ಹಾಗಾಗಿ ನಮ್ಮ ತಂಡದ ಅಭ್ಯರ್ಥಿಗಳಿಗೆ ಮತನೀಡಿ ಗೆಲ್ಲಿಸಬೇಕು' ಎಂದು ಕೋರಿದರು.
ಹಂಗಾಮಿ ಅಧ್ಯಕ್ಷ ಷಡಕ್ಷರಿ ಮಾತನಾಡಿ, 'ಈಗ ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲರೂ ಸಹ ನಮ್ಮ ಬೆಂಬಲಿತ ಅಭ್ಯರ್ಥಿಗಳೆಂದು ಘೋಷಣೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಉದ್ದೇಶಪೂರ್ವಕವಾಗಿ ಕೆಲವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಅಲ್ಲದೆ, ಕೆಲವು ಹಂಗಾಮಿ ಅಧ್ಯಕ್ಷರು ಸಂಘದ ಕಚೇರಿಯನ್ನು ಚುನಾವಣೆ ಕೆಲಸಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಆರೋಪಿಸಿದರು.