ಶಿವಮೊಗ್ಗ: ಪರೀಕ್ಷೆ ಅಂದ್ರೆ ಎಲ್ಲರಿಗೂ ಭಯ ಇರುವುದು ಸಹಜ. ಪರೀಕ್ಷೆಯ ಹೆಸರು ಕೇಳಿದ್ರೆ ವಿದ್ಯಾರ್ಥಿಗಳ ಬದಲಿಗೆ ಪೋಷಕರು ಹೌಹಾರುತ್ತಾರೆ. ಈ ನಿಟ್ಟಿನಲ್ಲಿ ನಗರದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಎನ್.ರಂಗಪ್ಪ ವಿದ್ಯಾರ್ಥಿಗಳಿಗೆ ಸರಳವಾದ ಕೆಲವು ಟಿಪ್ಸ್ ನೀಡಿದ್ದಾರೆ.
ಪರೀಕ್ಷೆ ಎಂಬ ಭಯದಿಂದ ಹೊರಬಂದು ಪರೀಕ್ಷೆ ಬರೆಯಬೇಕು. ಕೊರೊನಾ ಕಾರಣಕ್ಕೆ ಈ ಬಾರಿಯ ಪರೀಕ್ಷೆ ಸುಲಭವಾಗಿರುತ್ತದೆ. ಯಾರೂ ಹೆದರದೆ ಪರೀಕ್ಷೆಯನ್ನು ಚೆನ್ನಾಗಿ ಬರೆಯಿರಿ. ಪರೀಕ್ಷೆಯ ಎಲ್ಲಾ ಹಂತವನ್ನು ರೆಕಾರ್ಡಿಂಗ್ ಮಾಡಿಕೊಳ್ಳಲಾಗುತ್ತದೆ. ನಿಮಗೆ ಮೊದಲು ಪ್ರಶ್ನೆ ಪತ್ರಿಕೆಯನ್ನು ನೀಡಿದಾಗ ಶಾಂತವಾಗಿ ಚೆನ್ನಾಗಿ ಓದಿಕೊಂಡು ಅರ್ಥ ಮಾಡಿಕೊಳ್ಳಿ. ಇದಕ್ಕಾಗಿಯೇ ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ.
ವಿದ್ಯಾರ್ಥಿಗಳು ಮೊದಲು ತಿಳಿದಿರುವ ಪ್ರಶ್ನೆಗಳಿಗೆ ಉತ್ತರಿಸಿ, ನಂತರ ಕಷ್ಟಕರ ಪ್ರಶ್ನೆಗಳ ಕಡೆ ಗಮನ ಹರಿಸಬಹುದು. ಇದರಿಂದ ನಿಗದಿತ ಸಮಯಕ್ಕೆ ಪರೀಕ್ಷೆ ಬರೆದು ಮುಗಿಸಬಹುದು. ಮುಖ್ಯಾಂಶಗಳನ್ನು ಬರೆದ ಮೇಲೆ ಅದರ ಕೆಳಗೆ ಅಂಡರ್ ಲೈನ್ ಹಾಕುವುದರಿಂದ ಹೆಚ್ಚಿನ ಅಂಕಗಳನ್ನು ಗಳಿಸಬಹುದು.
ಈ ಬಾರಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ 15 ನಿಮಿಷ ಮುಂಚಿತವಾಗಿ ಹೋಗಿ, ನಿಮ್ಮ ಹಾಲ್ ಟಿಕೆಟ್, ಕಾಲೇಜಿನ ಐಡಿ ಕಾರ್ಡ್ ಹಿಡಿದುಕೊಂಡು ಹೋಗಿ. ಉತ್ತರ ಪತ್ರಿಕೆಯಲ್ಲಿ ನಿಮ್ಮ ರಿಜಿಸ್ಟ್ರಾರ್ ಸಂಖ್ಯೆಯನ್ನು ಸರಿಯಾಗಿ ಬರೆಯಿರಿ. ಉತ್ತರ ಪತ್ರಿಕೆಗೆ ಎಂಡ್ ಸೀಲ್ ಹಾಕುತ್ತಾರೆ. ಇದನ್ನೆಲ್ಲಾ ಮಾಡಿದರೆ ನೀವು ಯಶಸ್ಸು ಗಳಿಸಿದಂತೆ ಎಂದು ಶುಭ ಹಾರೈಸಿದ್ದಾರೆ.
'ನಮಗೆ ಪರೀಕ್ಷೆ ಅಂದ್ರೆ ಭಯವಿಲ್ಲ. ನಾಲ್ಕು ಪೂರ್ವಭಾವಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ನಾವು ಚೆನ್ನಾಗಿಯೇ ಅಂಕ ಗಳಿಸಿದ್ದೇವೆ. ನಮ್ಮ ಕಾಲೇಜಿನ ಉಪನ್ಯಾಸಕರು ಪ್ರತಿಯೊಂದು ಪಾಠವನ್ನು ಅರ್ಥವಾಗುವ ಹಾಗೆ ಮಾಡಿದ್ದಾರೆ. ಈ ಪರೀಕ್ಷೆ ನಮ್ಮ ಭವಿಷ್ಯದ ದೃಷ್ಟಿಯಿಂದ ನಮಗೆ ಅತ್ಯವಶ್ಯಕ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿಯೇ ಬರೆದು ಉತ್ತಮ ಅಂಕಗಳಿಸಿ, ನಮ್ಮ ಪೋಷಕರಿಗೆ ಹಾಗೂ ಕಾಲೇಜಿಗೆ ಹೆಸರು ತರುತ್ತೇವೆ' ಎನ್ನುತ್ತಾರೆ ವಿದ್ಯಾರ್ಥಿನಿ ಐಶ್ವರ್ಯ.
ಇದನ್ನೂ ಓದಿ: ದೇವರ ಮೊರೆ ಹೋದ ಮಾಜಿ ಸಚಿವ ಈಶ್ವರಪ್ಪ: ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ