ಶಿವಮೊಗ್ಗ: ಸಾಗರ ತಾಲೂಕಿನ ಕಾರ್ಗಲ್ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಶರಾವತಿ ವಿದ್ಯುತ್ವಗಾರದ ಸೆಕ್ಯೂರಿಟಿ ಶಿವಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ವಿಡಿಯೋ ವೈರಲ್ ಆಗಿದೆ.
ಶನಿವಾರ ಪಿಎಸ್ಐ ತಿರುಮಲೇಶ್ ತಮ್ಮ ಕರ್ತವ್ಯದ ನಿಮಿತ್ತ ವಡನ್ ಬೈಲ್ ಸರ್ಚ್ ಟ್ಯಾಂಕ್ ದಾಟಿ ಶರಾವತಿ ಚೆಕ್ ಪೊಸ್ಟ್ ಬಳಿ ಬಂದಾಗ ಅಲ್ಲಿ ಸೆಕ್ಯೂರಿಟಿ, ನಿವೃತ್ತ ಯೋಧ ಶಿವಕುಮಾರ್ ಅವರನ್ನು ಒಳಗೆ ಬಿಡಲು ಪಾಸ್ ಕೇಳಿದ್ದಾರೆ. ಶರಾವತಿ ವಿದ್ಯುತ್ ಗಾರಕ್ಕೆ ಪ್ರವೇಶ ಪಡೆಯಲು ಇಲ್ಲಿನ ಎಂಜಿನಿಯರಿಂಗ್ ಕಚೇರಿಯಲ್ಲಿ ಪಾಸ್ ಪಡೆದು ಒಳಗೆ ಹೋಗಬೇಕು. ಇದರಿಂದ ಶಿವಕುಮಾರ ಪಾಸ್ ಕೇಳಿದ್ದಾರೆ. ಆದರೆ ತಿರುಮಲೇಶ್ ಬಳಿ ಪಾಸ್ ಇರಲಿಲ್ಲವಂತೆ.
ಇದಕ್ಕೆ ಸೆಕ್ಯೂರಿಟಿ ಶಿವಕುಮಾರ್ ಪಾಸ್ ಇಲ್ಲದೆ ಒಳಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ತಿರುಮಲೇಶ್ ಶಿವಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ತಿರುಮಲೇಶ್ ಶಿವಕುಮಾರನ್ನು ನೂಕಿದ್ದಾರೆ ಎನ್ನಲಾದ ಸಿಸಿಟಿವಿ ವಿಡಿಯೋ ಹಾಗೂ ಶಿವಕುಮಾರ್ ಮಾಡಿಕೊಂಡ ವಿಡಿಯೋ ಎರಡು ವೈರಲ್ ಆಗಿವೆ.
ಇದನ್ನೂ ಓದಿ: ಸೇನಾಧಿಕಾರಿಗಳಿಂದ ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು
ಇಲ್ಲಿ ತಿರುಮಲೇಶ್ ತಾವು ಕರ್ತವ್ಯದಲ್ಲಿದ್ದು, ಇನ್ನೋರ್ವ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೆ, ತಿರುಮಲೇಶ್ ಕಾರ್ಗಲ್ ವ್ಯಾಪ್ತಿಯಲ್ಲಿರುವವರು. ಜೋಗ ವ್ಯಾಪ್ತಿಗೆ ಯಾಕೆ ಬಂದು ಹೀಗೆ ನಡೆದುಕೊಂಡರು ಎಂಬ ಪ್ರಶ್ನೆ ಮೂಡುತ್ತಿದೆ.