ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆ ಸಂಬಂಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಸಭೆ ನಡೆದಿತ್ತು. ಈ ಸಭೆಯಲ್ಲಿ ಪಾಲ್ಗೊಂಡ ಈಶ್ವರಪ್ಪ, ತಮ್ಮ ಭಾಷಣದ ವೇಳೆ ಅನೇಕ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸಭೆ ನಡೆದ ವ್ಯಾಪ್ತಿಯ ಜಯನಗರ ಪೊಲೀಸ್ ಠಾಣೆಯಲ್ಲಿ 153ಎ ಹಾಗೂ 504 ಅಡಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅರುಣ ಪುತ್ತಿಲ ವಿರುದ್ಧವೂ ದಾಖಲಾಗಿತ್ತು ಪ್ರಕರಣ: ರಾಗಿಗುಡ್ಡ ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಹಿಂದೂ ಮುಖಂಡ ಅರುಣ ಪುತ್ತಿಲ ವಿರುದ್ಧವೂ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಅಕ್ಟೋಬರ್ 6ರಂದು ರಾಗಿಗುಡ್ಡ ಬಡಾವಣೆಗೆ ಅರುಣ ಪುತ್ತಿಲ ಭೇಟಿ ನೀಡಿದ್ದರು.
ರಾಗಿಗುಡ್ಡದಲ್ಲಿ ಸೆಪ್ಟೆಂಬರ್ 1ರಂದು ಕಲ್ಲು ತೂರಾಟ ನಡೆದಿತ್ತು. ಅರುಣ್ ಪುತ್ತಿಲ ರಾಗಿಗುಡ್ಡ ಪ್ರದೇಶಕ್ಕೆ ಭೇಟಿ ನೀಡಿ, ಹಾನಿಗೊಳಗಾದವರ ಮನೆಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದರು. ರಾಗಿಗುಡ್ಡದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದ ಸಂದರ್ಭದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ರಾಗಿಗುಡ್ಡ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನಾ ಸಭೆ: ಯುಎಪಿಎ ಪ್ರಕರಣ ದಾಖಲಿಸಲು ಆಗ್ರಹ