ಶಿವಮೊಗ್ಗ: ಶಾಂತಿನಗರದ ನಾಗರಿಕ ಹಕ್ಕು ವೇದಿಕೆ ವತಿಯಿಂದ ಜಿಲ್ಲಾ ಕೊಳಗೇರಿ ಅಭಿವೃದ್ದಿ ಮಂಡಳಿ ಎದುರು ಪ್ರತಿಭಟನೆ ನಡೆಸಲಾಯಿತು. ಶಾಂತಿನಗರವನ್ನು ಕೊಳಗೇರಿ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆ ನಗರದಲ್ಲಿ 400 ಮನೆಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಾಣ ಮಾಡುತ್ತಿದೆ.
ಇದರಲ್ಲಿ ಶಾಂತಿನಗರದಲ್ಲಿಯೇ 300ಕ್ಕೂ ಅಧಿಕ ಮನೆಗಳಿವೆ. ಕಳೆದ 3 ವರ್ಷಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಅದು ಮುಗಿದಿಲ್ಲ. ಅಲ್ಲದೆ ನಿರ್ಮಾಣವಾಗುತ್ತಿರುವ ಮನೆಗಳು ಕಳಪೆ ಗುಣಮಟ್ಟದಿಂದ ಕೊಡಿವೆ.
ಇದು ಕೊಳಗೇರಿ ನಿವಾಸಿಗಳಿಗೆ ಆಂತಕವನ್ನು ಉಂಟುಮಾಡಿದೆ. ಈ ಮನೆಗಳ ನಿರ್ಮಾಣಕ್ಕೆ 4.95 ಲಕ್ಷ ರೂ.ಗಳನ್ನು ಕೇಂದ್ರ ಸರ್ಕಾರ PMAY ಯೋಜನೆಯಡಿ ಖರ್ಚು ಮಾಡುತ್ತಿದೆ. ಅಲ್ಲದೆ ಫಲಾನುಭವಿಯಿಂದಲೂ ಸಹ ಹಣ ಪಡೆದಿದೆ. ಆದರೂ ಸಹ ಕೊಳಗೇರಿ ಅಭಿವೃದ್ಧಿ ಮಂಡಳಿಯು ಗುಣಮಟ್ಟದ ಮನೆ ನಿರ್ಮಾಣ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮೂರು ವರ್ಷವಾದರೂ ಕಾಮಗಾರಿ ಮುಕ್ತಾಯವಾಗಿಲ್ಲ. ಇದರಿಂದ ಮನೆ ನಿರ್ಮಾಣಕ್ಕೆ ಜಾಗ ಕೊಟ್ಟ ಬಡವರು 3 ವರ್ಷದಲ್ಲಿ ಲಕ್ಷಾಂತರ ರೂ. ಬಾಡಿಗೆ ನೀಡುವಂತಾಗಿದೆ. ಇದರಿಂದ ತಕ್ಷಣ ಕಾಮಗಾರಿ ಮುಗಿಸಿ, ಗುಣಮಟ್ಟದ ಮನೆಯನ್ನು ಫಲಾನುಭವಿಗಳಿಗೆ ನೀಡುವಂತೆ ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕು ವೇದಿಕೆಯ ಅಧ್ಯಕ್ಷ ಸಯ್ಯದ್ ಮುಜೇಬುಲ್ಲಾ ನವರ ನೇತೃತ್ವದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.