ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಪ್ರಥಮವಾಗಿ ಕಿಡ್ಸ್ ಸಂಸ್ಥೆಯ ಸಮುದಾಯ ರೇಡಿಯೋ ಪ್ರಾರಂಭವಾಗಲಿದೆ. ಕೊಡಚಾದ್ರಿ ಇಂಟಿಗೇಟ್ರೆಡ್ ಡೆವಲೋಪ್ಮೆಂಟ್ ಸೂಸೈಟಿ (ಕಿಡ್ಸ್) ವತಿಯಿಂದ ಸಮುದಾಯ ರೇಡಿಯೋ ಪ್ರಾರಂಭವಾಗಲಿದೆ. ಈ ಕಿಡ್ಸ್ ಸಂಸ್ಥೆಯು ಪರಿಸರ ಅಧ್ಯಯನ ಕೇಂದ್ರವನ್ನು ಮಾಡಿಕೊಂಡು ಪರಿಸರವನ್ಜು ಅರಿಯಲು ಹೊರಟಿದೆ.
ಈ ಸಂಸ್ಥೆಗೆ ಕೇಂದ್ರದ ಪ್ರಸಾರ ಭಾರತಿ ವತಿಯಿಂದ ಸಮುದಾಯ ರೇಡಿಯೋ ಎಫ್ಎಂ ಪ್ರಾರಂಭಿಸಲು ಅನುಮತಿ ದೊರೆತಿದ್ದು, ಈ ಎಫ್ಎಂ ರೇಡಿಯೋಗೆ ಪ್ರಸಾರ ಭಾರತಿರವರು ರೇಡಿಯೋ ಶಿವಮೊಗ್ಗ ಎಫ್ಎಂ 90.8 MH ಸಮುದಾಯ ರೇಡಿಯೋ ಕೇಂದ್ರ ಎಂದು ಹೆಸರಿಸಿದೆ. ಇದಕ್ಕೆ 90.8 ಕಂಪನಾಂಕವನ್ನು ನೀಡಿದೆ. ಎಫ್ಎಂ ರೇಡಿಯೋ ಪ್ರಸಾರವು ಮುಂದಿನ 6 ತಿಂಗಳ ಅವಧಿಯೊಳಗೆ ತನ್ನ ಕೆಲಸ ಪ್ರಾರಂಭಿಸಲಿದೆ.
30 ಕಿ.ಮೀ ವ್ಯಾಪ್ತಿಯಲ್ಲಿ ಪ್ರಸಾರ
ರೇಡಿಯೋ ಅವಿದ್ಯಾವಂತ ಸೇರಿದಂತೆ ಎಲ್ಲಾ ಸಮುದಾಯದವರನ್ನು ಬೇಗನೆ ತಲುಪುವ ಮಾಧ್ಯಮವಾಗಿದೆ. ಪ್ರಮುಖವಾಗಿ ಕಿಡ್ಸ್ ಸಂಸ್ಥೆ ಶಿಕ್ಷಣ ಮತ್ತು ಪರಿಸರದ ಕುರಿತಾಗಿ ಅರಿವು ಮೂಡಿಸುವಲ್ಲಿ ರೇಡಿಯೋ ಶಿವಮೊಗ್ಗವನ್ನು ಬಳಸಿ ಅವಿರತವಾಗಿ ಕೆಲಸ ಮಾಡಲು ನಿರ್ಧರಿಸಿದೆ. ರೇಡಿಯೋ ಶಿವಮೊಗ್ಗಕ್ಕೆ ಅದರ ಕೇಂದ್ರದಿಂದ 30 ಕಿ.ಮೀ ದೂರ ಪ್ರಸಾರಕ್ಕೆ ಅನುಮತಿ ನೀಡಿದೆ.
ಇದಕ್ಕಾಗಿ ಕಿಡ್ಸ್ ಸಂಸ್ಥೆಯು ತನ್ನ ವ್ಯಾಪ್ತಿಗೆ ಬರುವ ಶಾಲೆಗಳನ್ನು ಒಳಗೊಂಡು ಕಾರ್ಯಕ್ರಮ ರೂಪಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ತನ್ನ ವ್ಯಾಪ್ತಿಯ ಶಾಲಾ-ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು, ವಿಶ್ವವಿದ್ಯಾನಿಲಯಗಳನ್ನು ತೂಡಗಿಸಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು ತಮ್ಮಲ್ಲಿ ದೊರೆಯುವ ಆರೋಗ್ಯ ಸೇವೆಗಳ ಕುರಿತು ಅರಿವು ಮೂಡಿಸಲು ಸಿದ್ಧತೆ ನಡೆಸಿದೆ.
ರೇಡಿಯೋ ಶಿವಮೊಗ್ಗ ತನ್ನ ವ್ಯಾಪ್ತಿಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳ ಅಭಿವೃದ್ದಿ ಕಾರ್ಯಕ್ರಮಗಳನ್ನ ಅನುಷ್ಠಾನಕ್ಕೆ ಪೂರಕವಾಗಿ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ. ಇದರ ಜೊತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ 27 ಇಲಾಖೆಗಳ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಲುಪಿಸಲು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.
ಕಲೆ- ಸಾಹಿತ್ಯ- ಕಲಾವಿದರಿಗೆ ವೇದಿಕೆ
ರೇಡಿಯೋ ಶಿವಮೊಗ್ಗ ಎಂಎಫ್ ಕೇಂದ್ರವು ತನ್ನ ವ್ಯಾಪ್ತಿಯಲ್ಲಿನ ಕಲಾವಿದರಿಗೆ ವೇದಿಕೆಯಾಗಲಿದೆ. ಯಾರು ಅವಕಾಶ ವಂಚಿತರಾಗಿರುತ್ತಾರೂ ಅವರಿಗೆ ಇಲ್ಲಿ ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ರೇಡಿಯೋ ಶಿವಮೊಗ್ಗ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ಕಾರ್ಯನಿರ್ವಹಿಸಲು ನಿರ್ಧರಿಸಿದೆ. ಸಮುದಾಯ ರೇಡಿಯೋದಲ್ಲಿ ಸಮುದಾಯಗಳ ಪಾಲ್ಗೂಳ್ಳುವಿಕೆಗಾಗಿ ಗ್ರಾಮ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್, ಪಾಲಿಕೆ ಸೇರಿದಂತೆ ಸಂಘ ಸಂಸ್ಥೆಗಳು, ಶಾಲಾ- ಕಾಲೇಜುಗಳ ಸದಸ್ಯತ್ವ ಪಡೆಯಲು ನಿರ್ಧರಿಸಿದೆ.
ಈ ಸದಸ್ಯತ್ವಕ್ಕೆ ವಾರ್ಷಿಕವಾಗಿ 1 ಸಾವಿರ ರೂ. ಶುಲ್ಕ ವಿಧಿಸಲು ಮುಂದಾಗಿದೆ. ಸದಸ್ಯತ್ವ ಪಡೆದವರಿಗೆ ವರ್ಷದಲ್ಲಿ 30 ನಿಮಿಷಗಳ ಕಾಲ ಉಚಿತ ಕಾರ್ಯಕ್ರಮಕ್ಕೆ ಅವಕಾಶ ನೀಡಲಿದೆ. ರೇಡಿಯೋ ಶಿವಮೊಗ್ಗವು ಶಿವಮೊಗ್ಗ ಹೊರವಲಯ ರತ್ನಾಕರ್ ಬಡಾವಣೆಯಲ್ಲಿ ಸ್ಥಾಪನೆಯಾಗಲಿದೆ. ಇದರ ನಿರ್ಮಾಣಕ್ಕಾಗಿ ಸುಮಾರು 40 ಲಕ್ಷ ರೂ. ವ್ಯಯಿಸಲು ಕಿಡ್ಸ್ ಸಂಸ್ಥೆ ನಿರ್ಧರಿಸಿದೆ.
ಇದರೂಂದಿಗೆ ಜಾಹೀರಾತು ಸಹ ನೀಡಬಹುದಾಗಿದೆ. ಸಮುದಾಯ ರೇಡಿಯೋಗಳು ಇತರೆ ಕಡೆ ಉತ್ತಮವಾಗಿ ಮೂಡಿಬರುತ್ತಿವೆ. ಇದಕ್ಕಾಗಿ ಕಿಡ್ಸ್ ಸಂಸ್ಥೆಯು ಆ್ಯಪ್ ಸಹ ಹೊರತರಲಿದೆ. ಈ ಮೂಲಕ ಇನ್ನಷ್ಟು ಜನರನ್ನು ತಲುಪುವ ಪ್ರಯತ್ನದಲ್ಲಿದೆ.