ಶಿವಮೊಗ್ಗ : 2023ರಲ್ಲಿ ಹೇಗಿದ್ರೂ ಟಿಕೆಟ್ ಸಿಗಲ್ಲ ಎಂಬುದು ಸಚಿವ ಕೆ ಎಸ್ ಈಶ್ವರಪ್ಪರಿಗೆ ಗೊತ್ತಾಗಿದೆ. ಹೀಗಾಗಿ, ಈ ಅವಧಿಯಲ್ಲಿಯೇ ಸಿಎಂ ಆಗೋಕೆ ಪ್ರಯತ್ನ ಮಾಡ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರಕ್ಕೆ ಹೋರಾಡಿ ಕೊನೆದಾಗಿ ಟಿಕೆಟ್ ತಗೊಂಡಿದ್ರು. ನನ್ ಟಿಕೆಟ್ ಹಾರಿಸಿಯೇ ಬಿಟ್ಟಿದ್ದರು. ಏನೇನೋ ಮಾಡಿ ಟಿಕೆಟ್ ತಂದೆ ಎಂದು ಚುನಾವಣೆ ಮುಗಿದಾಗ ಸ್ವತಃ ಈಶ್ವರಪ್ಪನವರೇ ಒಮ್ಮೆ ಹೇಳಿದ್ದರು. ಆಗ ಈಶ್ವರಪ್ಪರ ಟಿಕೆಟ್ಗೆ ಅಡ್ಡಿಯಾಗಿದ್ದು ಯಡಿಯೂರಪ್ಪ. ಹಾಗಾಗಿ, ಅಂದಿನಿಂದ ಪ್ರೀತಿ, ಗೌರವ ಸ್ವಲ್ಪ ಹೆಚ್ಚಾಗಿದೆ ಅಂದ್ರು.
ಕಳೆದ ಕೆಲ ದಿನದಿಂದ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಚರ್ಚೆ ನಡಿತೀದೆ. 2023ರಲ್ಲಿ ಟಿಕೆಟ್ ಸಿಗಲ್ಲ ಎಂಬುದು ಕೆ ಎಸ್ ಈಶ್ವರಪ್ಪರಿಗೆ ಗೊತ್ತಾಗಿದೆ. ಹೀಗಾಗಿ, ಈ ಅವಧಿಯಲ್ಲಿಯೇ ಸಿಎಂ ಆಗೋಕೆ ಪ್ರಯತ್ನ ಮಾಡ್ತಿದ್ದಾರೆ. ಕೊನೆಪಕ್ಷ 6 ತಿಂಗಳಾದ್ರೂ ಸಿಎಂ ಆಗ್ಬೇಕಾದ್ರೇ ಈಗ ಇರೋರು ಹೋಗ್ಬೇಕು. ಈ ಬದಲಾವಣೆಗೆ ಕಾರಣ ಬೇಕಿದೆ.
ಇದಕ್ಕಾಗಿಯೇ ರಾಜ್ಯ ಸರ್ಕಾರದ ಅವ್ಯವಹಾರಗಳನ್ನು ಹೊರ ಹೇಳುತ್ತಿದ್ದಾರೆ. ಕೇವಲ ಅವರ ಇಲಾಖೆಯದ್ದಲ್ಲ. ಇಡೀ ಸರ್ಕಾರದ ಅವ್ಯವಹಾರದ ಬಗ್ಗೆ ಅವರು ಮಾತನಾಡಿದ್ದಾರೆ. ಇದು ಸುಳ್ಳಾಗಿದ್ರೇ ಸಚಿವ ಈಶ್ವರಪ್ಪ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಸತ್ಯವಾದ್ರೇ ಸಿಎಂ ರಾಜೀನಾಮೆ ಕೊಡ್ಬೇಕು. ಆಮೇಲೆ ಬೇಕಿದ್ದರೆ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಅವರನ್ನೇ ಸಿಎಂ ಮಾಡಲಿ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.