ಶಿವಮೊಗ್ಗ: ಆಹಾರ ವಸ್ತುಗಳನ್ನು ಖರೀದಿಸಲಾಗದೆ ಪರದಾಡುತ್ತಿದ್ದ 70 ವರ್ಷದ ವೃದ್ಧ ದಂಪತಿಗೆ ಪೊಲೀಸರು ದಿನಸಿ ವಸ್ತುಗಳನ್ನು ನೀಡಿ ಸಂಕಷ್ಟಕ್ಕೆ ನೆರವಾದರು.
ಶಿವಮೊಗ್ಗ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಕ್ವಾಟ್ರಸ್ನಲ್ಲಿ ಈ ದಂಪತಿ ವಾಸವಾಗಿದ್ದಾರೆ. ಇವರ ಸಂಬಂಧಿಕರೊಬ್ಬರು ಮೃತಪಟ್ಟಿರುವ ಕಾರಣ ಮನೆಯವರೆಲ್ಲರೂ ತಮಿಳುನಾಡಿಗೆ ಹೋಗಿ ಲಾಕ್ಡೌನ್ನಲ್ಲಿ ಸಿಲುಕಿದ್ದಾರೆ. ಹೀಗಾಗಿ ಇವರ ಸಂಕಷ್ಟ ತಿಳಿದ ಪೊಲೀಸ ವರಿಷ್ಠಾಧಿಕಾರಿ ಶಿವಮೊಗ್ಗ ಗ್ರಾಮಾಂತರ ಪಿಎಸ್ಐಗೆ ಸಹಾಯ ಮಾಡಲು ಸೂಚಿಸಿದ್ದರು.
ಪಿಎಸ್ಐ ಸುರೇಶ್ ಅವರು ವೃದ್ಧರನ್ನು ಭೇಟಿಯಾಗಿ ಲಾಕ್ಡೌನ್ ಮುಗಿಯುವವರೆಗೂ ಬೇಕಾದ ದಿನಸಿ ವಸ್ತುಗಳನ್ನು ಹಾಗೂ ಮಾಸ್ಕ್ಗಳನ್ನು ಉಚಿತವಾಗಿ ನೀಡಿದ್ದಾರೆ.
ಪೊಲೀಸರ ಸಾಮಾಜಿಕ ಕಾಳಜಿಗೆ ಪ್ರಶಂಸೆ ವ್ಯಕ್ತವಾಗಿದೆ.