ಶಿವಮೊಗ್ಗ: ಇಂದು ಬೆಳಗ್ಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಎದೆಗೆ ಚಾಕು ಇರಿದಿದ್ದ ಆರೋಪಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ದೊಡ್ಡಪೇಟೆ ಪೊಲೀಸ್ ಕಾನ್ಸ್‌ಸ್ಟೇಬಲ್ ಗುರುನಾಯ್ಕ ಮೇಲೆ ದಾಳಿ ಮಾಡಿರುವ ಆರೋಪಿ ಶಾಹಿದ್ ಖುರೇಷಿಯನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಕೋಟೆ ಠಾಣೆ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಕಾನ್ಸ್ಟೇಬಲ್ಗಳಾದ ಗುರುನಾಯ್ಕ ಹಾಗೂ ರಮೇಶ್ ಆರೋಪಿ ಸಾಹೀದ್ ಖುರೇಷಿಯನ್ನು ಬಂಧಿಸಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ನಗರದ ಕ್ಲಾರ್ಕ್ ಪೇಟೆ ಬಳಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗುರುನಾಯ್ಕ ಎನ್ನುವ ಸಿಬ್ಬಂದಿಯ ಎದೆಗೆ ಚಾಕು ಇರಿದು ಆರೋಪಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮಿಪ್ರಸಾದ್ , ದೊಡ್ಡಪೇಟೆ ಪೊಲೀಸ್ ಕಾನ್ಸ್‌ಟೇಬಲ್ ಗುರುನಾಯಕ್ ಎದೆಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಶಾಹಿದ್ ಖುರೇಷಿಯನ್ನು ನಮ್ಮ ಸಿಬ್ಬಂದಿ ಬಂಧಿಸಲು ಹೋದಾಗ ಮತ್ತೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಆತ್ಮ ರಕ್ಷಣೆಗಾಗಿ ಕೋಟೆ ಠಾಣೆ ಸಿಪಿಐ ಚಂದ್ರಶೇಖರ್ ನಗರದ ರಾಜೀವ್ ಗಾಂಧಿ ಬಡಾವಣೆ ಬಳಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಈತನ ಮೇಲೆ ಹಳೆಯ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೀರಿನಲ್ಲಿ ಸರ್ವಾಂಗಾಸನ, ಕಾಲಿಂದಲೇ ಬಿಡ್ತಾರೆ ಬಾಣ.. ಹಾಸನದಲ್ಲೋರ್ವ ವಿಶಿಷ್ಟ ಯೋಗಪಟು